ಕುಡಿಯುವ ನೀರಿನ ಸಮಸ್ಯೆ: ಗ್ರಾಪಂ ನಿರ್ಲಕ್ಷ
ಶಿಕಾರಿಪುರ,ಮಾ.29: ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನೀರಿನಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ಕಪ್ಪನಹಳ್ಳಿ ಗ್ರಾಮದ ಜನತೆಗೆ ಉಚಿತವಾಗಿ ಕೊಳವೆಬಾವಿಯ ನೀರು ನೀಡುವುದಾಗಿ ಸ್ಥಳೀಯ ಸಮಾಜ ಸೇವಕ, ಜಿಪಂ ಮಾಜಿ ಸದಸ್ಯ ರಾಮಣ್ಣ ಹೆಚ್ಚಿನ ಕಾಳಜಿ ವಹಿಸಿದ್ದರೂ ಗ್ರಾಪಂ ಅಭಿವೃದ್ಧ್ದಿ ಅಧಿಕಾರಿ ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಿರ್ಲಕ್ಷ ತಾಳಿದ್ದಾರೆ.
ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ವಿಪರೀತವಾಗುತ್ತಿದ್ದು, ಈ ದಿಸೆಯಲ್ಲಿ ಹೊಸ ಕೊಳವೆಬಾವಿಗಾಗಿ ತಾಲೂಕು ಆಡಳಿತ ಹೆಚ್ಚಿನ ನಿಗಾವಹಿಸಿದೆ. ಕಪ್ಪನಹಳ್ಳಿ ಗ್ರಾಮದಲ್ಲಿ 2-3 ದಿನಕ್ಕೆ ಗ್ರಾಪಂ ಕುಡಿಯುವ ನೀರು ಒದಗಿಸುತ್ತಿದ್ದು, ಸ್ಥಳೀಯ ಸಮಾಜ ಸೇವಕ, ಜಿಪಂ ಮಾಜಿ ಸದಸ್ಯ ರಾಮಣ್ಣ ನೀರಿನ ಸಮಸ್ಯೆಯಿಂದಾಗಿ ಬಳಲುತ್ತಿರುವ ಗ್ರಾಮಸ್ಥರಿಗೆ ಉಚಿತವಾಗಿ ತಮ್ಮ ಖಾಸಗಿ ಕೊಳವೆಬಾವಿಯ ನೀರನ್ನು ನೀಡುವುದಾಗಿ ಗ್ರಾಪಂ ಪಿಡಿಒ ಲೋಹಿತ್ ರವರಿಗೆ ಕಳೆದ ಕೆಲ ದಿನದಿಂದ ವೌಖಿಕವಾಗಿ ತಿಳಿಸಿದರು. ಈ ಬಗ್ಗೆ ಇದುವರೆಗೂ ಸ್ಪಷ್ಟ ತೀರ್ಮಾನ ಕೈಗೊಳ್ಳದ ಅಧಿಕಾರಿ ವರ್ತನೆ, ಗ್ರಾಮಸ್ಥರ ತೊಂದರೆ ಗಮನಿಸಿ ಲಿಖಿತವಾಗಿ ಮನವಿ ಮಾಡಿಕೊಂಡರೂ ಜವಾಬ್ದಾರಿಯುತವಾಗಿ ವರ್ತಿಸದ ಅಧಿಕಾರಿಯ ನಡವಳಿಕೆಯಿಂದ ಬೇಸತ್ತು ಮಂಗಳವಾರ ಖುದ್ದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಉಚಿತವಾಗಿ ಕೊಳವೆಬಾವಿಯ ನೀರನ್ನು ಗ್ರಾಮಸ್ಥರಿಗೆ ನೀಡುವುದಾಗಿ ಲಿಖಿತವಾಗಿ ಮನವಿ ಸಲ್ಲಿಸಿ ಸಾಮಾಜಿಕ ಕಾಳಜಿಯನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಹಿತ್ತಲ ತಾಪಂ ಸದಸ್ಯ ಪರಮೇಶ್ವರಪ್ಪ, ಅಗ್ರಹಾರ ಮುಚುಡಿ ಗ್ರಾಪಂ ಅಧ್ಯಕ್ಷ ದಾನಪ್ಪ, ಗಾಮ ಗ್ರಾಪಂ ಸದಸ್ಯ ಮೋಹನಕುಮಾರ್, ತಿರುಕಪ್ಪ, ಉಮೇಶರಾವ್, ಮಲ್ಲೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.





