ಇಂದಿನಿಂದ ಎಸೆಸೆಲ್ಸಿ ಪರೀಕ್ಷೆ
ಕಾರವಾರ, ಮಾ. 29: ಮಾರ್ಚ್ 30ರಿಂದ ಆರಂಭವಾಗಲಿರುವ ಎಸೆಸೆಲ್ಸಿ ಪರೀಕ್ಷೆಗೆ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 10,778 ವಿದ್ಯಾ ರ್ಥಿಗಳು ಹಾಜರಾಗುತ್ತಿದ್ದು, ಒಟ್ಟು 37 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಕಾರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಬಿ.ಪುಂಡಲೀಕ್ ತಿಳಿಸಿದ್ದಾರೆ.
ಕಾರವಾರದಲ್ಲಿ 11, ಅಂಕೋಲಾದಲ್ಲಿ 4, ಕುಮಟಾದಲ್ಲಿ 6, ಹೊನ್ನಾ ವರ ಹಾಗೂ ಭಟ್ಕಳದಲ್ಲಿ ತಲಾ 8 ಪರೀಕ್ಷಾ ಕೇಂದ್ರಗಳಿವೆ. 1,0327 ಹೊಸ ವಿದ್ಯಾರ್ಥಿಗಳು, 161 ಪುನರಾವರ್ತಿತ ವಿದ್ಯಾರ್ಥಿಗಳು, 290 ಮಂದಿ ಖಾಸಗಿ ವಿದ್ಯಾರ್ಥಿಗಳು ಸೇರಿ ಒಟ್ಟು 10,778 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ 5,129 ಬಾಲಕರು, 5,198 ಬಾಲಕಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಮಾ. 30 ರಂದು ಪ್ರಥಮ ಭಾಷೆ , ಎ. 1ರಂದು ವಿಜ್ಞಾನ, ಎ. 4ರಂದು ಗಣಿತ, ಎ. 6ರಂದು ದ್ವಿತೀಯ ಭಾಷೆ, ಎ. 11ರಂದು ಸಮಾಜ ವಿಜ್ಞಾನ ಹಾಗೂ ಎ. 13ರಂದು ತೃತೀಯ ಭಾಷೆ ಪರೀಕ್ಷೆಗಳು ಜರಗಲಿವೆ.
ಕಾರವಾರದ 11 ಪರೀಕ್ಷಾ ಕೇಂದ್ರಗಳಲ್ಲಿ 2,141 ಶಾಲಾ ವಿದ್ಯಾರ್ಥಿಗಳು, ಹಾಗೂ 74 ಖಾಸಗಿ ವಿದ್ಯಾರ್ಥಿಗಳು, ಅಂಕೋಲಾದ 4 ಪರೀಕ್ಷಾ ಕೇಂದ್ರಗಳಲ್ಲಿ 1,390 ಶಾಲಾ ವಿದ್ಯಾರ್ಥಿಗಳು, ಕುಮಟಾದ 6 ಪರೀಕ್ಷಾ ಕೇಂದ್ರಗಳಲ್ಲಿ 2,259 ವಿದ್ಯಾರ್ಥಿಗಳು, ಹೊನ್ನಾವರದ 8 ಪರೀಕ್ಷಾ ಕೇಂದ್ರಗಳಲ್ಲಿ 2,237 ವಿದ್ಯಾರ್ಥಿಗಳು, ಭಟ್ಕಳದ 8 ಪರೀಕ್ಷಾ ಕೇಂದ್ರಗಳಲ್ಲಿ 2,300 ಶಾಲಾ ವಿದ್ಯಾರ್ಥಿಗಳು ಹಾಗೂ 39 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಖಾಸಗಿ ಅಭ್ಯರ್ಥಿಗಳಿಗಾಗಿ ಕಾರವಾರ ತಾಲೂಕಿನಲ್ಲಿ 1 ಖಾಸಗಿ ಪರೀಕ್ಷಾ ಕೇಂದ್ರವಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತ ದಳದವರು, ಕೊಠಡಿ ಮೇಲ್ವಿಚಾರಕರು, ಕಚೇರಿ ಸಹಾಯಕರು ಸೇರಿ 756 ಜನ ಶಿಕ್ಷಕ ಸಿಬ್ಬಂದಿ ವರ್ಗದವರು ಕರ್ತವ್ಯ ನಿರ್ವಹಿಸಲಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಕೊಠಡಿಗಳು, ಪೀಠೋಪಕರಣ, ಕುಡಿಯುವ
ನೀರು, ಶೌಚಾಲಯ, ಫ್ಯಾನ್ ಮತ್ತು ಲೈಟ್ ಮೊದಲಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲು ಪರೀಕ್ಷಾ ಕೇಂದ್ರದ ಹತ್ತಿರವಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಅಗತ್ಯ ಕ್ರಮ ಜರಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು. ಪರೀಕ್ಷೆಗಳು ಸುಗಮವಾಗಿ ನಡೆಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಉಪನಿ ರ್ದೇಶಕರ ನೇತೃತ್ವದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಿಚಕ್ಷಣಾ ದಳಗಳನ್ನು ರಚಿಸಲಾಗಿದೆ. ಜಿಲ್ಲಾ ಹಂತದಲ್ಲಿ ಅಂತರ್‌ಜಿಲ್ಲಾ ವೀಕ್ಷಣಾ ದಳಗಳು ಮತ್ತು ತಾಲೂಕಿನಲ್ಲಿ ಪ್ರತೀ ಪರೀಕ್ಷಾ ಕೇಂದ್ರಕ್ಕೂ ಇಬ್ಬರು ಸ್ಥಾನಿಕ ಜಾಗೃತ ದಳದವರನ್ನು ರಾಜ್ಯ ಮಟ್ಟದಿಂದ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.







