ಪೊಲೀಸರಿಂದ ವರದಿ ಕೇಳಲಿರುವ ಸಮಿತಿ
ಛತ್ತೀಸ್‌ಗಡ: ಪತ್ರಕರ್ತರ ಬಂಧನ
ರಾಯ್ಪುರ, ಮಾ.29: ಛತ್ತೀಸ್‌ಗಡದ ನಕ್ಸಲ್ ಪೀಡಿತ ಬಸ್ತಾರ್ ವಲಯದಲ್ಲಿ ಪತ್ರಕರ್ತರ ಬಂಧನದ ಕುರಿತು ವಿವಾದದ ನಡುವೆಯೇ, ಪತ್ರಕರ್ತರ ಹಕ್ಕುಗಳ ರಕ್ಷಣೆಗಾಗಿ ರಚಿಸಲಾಗಿರುವ ಉನ್ನತ ಮಟ್ಟದ ಸರಕಾರಿ ಸಮಿತಿಯೊಂದು, ಪೊಲೀಸರಿಂದ ವರದಿಯೊಂದನ್ನು ಪಡೆಯಲು ಸೋಮವಾರ ನಿರ್ಧರಿಸಿದೆ.
ಪತ್ರಕರ್ತರಾದ ಪ್ರಭಾತ್ ಸಿಂಗ್, ದೀಪಕ್ ಜೈಸ್ವಾಲ್, ಸೋಮಾರು ನಾಗ್ ಹಾಗೂ ಸಂತೋಷ್ ಯಾದವ್‌ರ ಪ್ರಕರಣಗಳಿಗೆ ಸಂಬಂಧಿಸಿ ವಿವರವಾದ ವರದಿಯನ್ನು ಬಸ್ತಾರ್ ವಲಯದ ಪೊಲೀಸ್ ಮಹಾ ನಿರೀಕ್ಷಕ ಹಾಗೂ ಸಂಬಂಧಿತ ಪೊಲೀಸ್ ಅಧೀಕ್ಷಕರಿಂದ ಕೇಳಲಾಗುವುದು ಹಾಗೂ ಎ.6ರಂದು ನಡೆಯಲಿರುವ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದೆಂದು ಛತ್ತೀಸ್‌ಗಡ ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ರಾಜೇಶ್‌ಸುಕುಮಾರ್ ಟೊಪ್ಪೊ ಪಿಟಿಐಗೆ ತಿಳಿಸಿದ್ದಾರೆ.
ಸಮಿತಿಯ ಸಾಮಾನ್ಯ ಆಡಳಿತ ಇಲಾಖೆಯ ಕಾರ್ಯದರ್ಶಿ ವಿಕಾಸಶೀಲ್, ಟೊಪ್ಪೊ, ಗೃಹ ಇಲಾಖೆಯ ಕಾರ್ಯದರ್ಶಿ ಅರುಣ್ ದೇವ್ ಗೌತರಿ, ಸಿಐಡಿ,ಎಡಿಜಿ ರಾಜೀವ ಶ್ರೀವಾಸ್ತವ ಹಾಗೂ ಹಿರಿಯ ಪತ್ರಕರ್ತರಾದ ರುಚಿರ್ ಗರ್ಗ್ ಮತ್ತು ಮಣಿ ಕುಂತಳಾ ಬೋಸ್‌ರನ್ನು ಒಳಗೊಂಡಿದೆ.
ಬಂಧಿತರು ಸಾರ್ವಜನಿಕ ಸಂಪರ್ಕ ಕಚೇರಿಯ ದಾಖಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೆಂದು ಪಟ್ಟಿ ಮಾಡಲ್ಪಟ್ಟಿಲ್ಲ ಹಾಗೂ ಅವರು ಇತರ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರೆಂಬ ಬಸ್ತಾರ್ ಪೊಲೀಸರ ಪ್ರತಿಪಾದನೆಂದು ಹಿನ್ನೆಲೆಯಲ್ಲಿ, ಪತ್ರಕರ್ತ ಎಂಬುದರ ‘ವ್ಯಾಖ್ಯೆಯ’ ಕುರಿತಾಗಿಯೂ ಸಮಿತಿ ಚರ್ಚಿಸಿದೆ.
ಪ್ರಭಾತ್ ಸಿಂಗ್, ವಾಟ್ಸ್‌ಆ್ಯಪ್ ಗುಂಪಿನಲ್ಲಿ ಆಕ್ಷೇಪಾರ್ಹ ಬರಹವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಪ್ರಕಾರ ಹಾಗೂ ಇತರ ಮೂರು ಪ್ರಕರಣಗಳ ಸಂಬಂಧ ಮಾ.22ರಂದು ಬಂಧಿಸಲ್ಪಟ್ಟಿದ್ದಾರೆ. ಪರೀಕ್ಷೆಯ ವೇಳೆ, ಅನುಮತಿ ಪಡೆಯದೆ ಶಾಲೆಯೊಂದರ ಆವರಣವನ್ನು ಪ್ರವೇಶಿಸಿದ ಹಾಗೂ ಸಿಬ್ಬಂದಿಯ ಮೇಲೆ ಕೈ ಮಾಡಿದ ದೂರಿನನ್ವಯ ಮಾ.26ರಂದು ಜೈಸ್ವಾಲ್‌ರನ್ನು ಸೆರೆಹಿಡಿಯಲಾಗಿದೆ. ಇಬ್ಬರೂ ದಾಂತೇವಾಡ ಮೂಲದವರು.
ಸೋಮಾರು ನಾಗ್ ಹಾಗೂ ಸಂತೋಷ್ ಯಾದವ್‌ರನ್ನು ಪೊಲೀಸರು ಕಳೆದ ವರ್ಷ ಬಂಧಿಸಿದ್ದಾರೆ.





