‘ದೇಶ ವಿರೋಧಿ’ ಜೆಎನ್‌ಯು ಸೇರಲು ವಿದ್ಯಾರ್ಥಿಗಳ ಕ್ಯೂ ಇರುವ 2,700 ಸೀಟಿಗೆ 75,000 ಅರ್ಜಿಗಳು
ಹೊಸದಿಲ್ಲಿ , ಮಾ. 29: ದೇಶ ವಿರೋಧಿ ಚಟುವಟಿಕೆಗಳು ಹಾಗೂ ದೇಶದ್ರೋಹಿಗಳಿರುವ ವಿವಿಯೆಂದು ಬಿಜೆಪಿಯ ಸಚಿವರು, ಸಂಘ ಪರಿವಾರ ಹಣೆಪಟ್ಟಿ ಹಚ್ಚಿರುವ ಜೆಎನ್‌ಯುಗೆ ಈ ಬಾರಿಯೂ ದಾಖಲೆಯ ವಿದ್ಯಾರ್ಥಿಗಳು ದಾಖಲಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದೊಂದು ತಿಂಗಳ ಅರ್ಜಿ ಸಲ್ಲಿಸುವ ಅವಧಿಯಲ್ಲಿ ಒಟ್ಟು ಲಭ್ಯವಿರುವ 2,700 ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ಕೋರ್ಸುಗಳಿಗೆ 75,000 ವಿದ್ಯಾರ್ಥಿಗಳು ಆನ್ ಲೈನ್‌ನಲ್ಲಿ ಹಾಗೂ ಸುಮಾರು 500 ವಿದ್ಯಾರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕ್ಯಾಂಪಸ್ ಮೂಲಗಳನ್ನು ಉದ್ದೇಶಿಸಿ ದಿ ಟೆಲಿಗ್ರಾಫ್ ವರದಿ ಮಾಡಿದೆ. ಕಳೆದ ವರ್ಷ 79,000 ಹಾಗೂ ಅದರ ಹಿಂದಿನ ವರ್ಷ 72,000 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಬಿಜೆಪಿ ಹಾಗೂ ಸರಕಾರವೇ ವಿವಿಯ ವಿರುದ್ಧ ಅಪಪ್ರಚಾರ ನಡೆಸಿಯೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುವುದು ಉತ್ತಮ ಬೆಳವಣಿಗೆ ಎಂದು ವಿವಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಖುದ್ದು ಗೃಹ ಸಚಿವ ರಾಜನಾಥ್ ಸಿಂಗ್ ಅವರೇ ಜೆಎನ್‌ಯುನಲ್ಲಿ ನಡೆದ ಕಾರ್ಯಕ್ರಮಕ್ಕೆ ಲಷ್ಕರೆ ತಯ್ಯಿಬಾ ಹಫೀಝ್ ಸಯೀದ್ ನ ಬೆಂಬಲ ಇತ್ತು ಎಂದು ಹೇಳಿದ್ದರು. ಬಿಜೆಪಿ ಸಂಸದರು, ಸಂಘಪರಿವಾರದ ನಾಯಕರು ವಿವಿಯಲ್ಲಿ ದೇಶವಿರೋಧಿ ಚಟುವಟಿಕೆ ನಡೆಯುತ್ತಿರುವುದರಿಂದ ಅದನ್ನು ಮುಚ್ಚಬೇಕು ಎಂದೂ ಆಗ್ರಹಿಸಿದ್ದರು. ಇಷ್ಟೆಲ್ಲ ಅಪಪ್ರಚಾರದ ಹೊರತಾಗಿಯೂ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿರುವುದು ಸುಳ್ಳು ಅಭಿಯಾನ ವಿಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಅಜಯ್ ಪಟ್ನಾಯಕ್ ಹೇಳಿದ್ದಾರೆ. ಮುಂದಿನ ತಿಂಗಳು ಪ್ರವೇಶ ಪರೀಕ್ಷೆ ನಡೆಯಲಿದೆ.





