ಸುಳ್ಳು ಜಾತಿ ಪ್ರಮಾಣ ಪತ್ರ: ಡಿಎಸ್ಸೆಸ್ ಕಾರ್ಯಕರ್ತರ ಧರಣಿ

ಕಡೂರು, ಮಾ.29: ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕೂಡಲೆ ಕ್ರಮ ಜರಗಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ಟ್‌ರಿಗೆ ಮನವಿ ಸಲ್ಲಿಸಿದರು.
ಈ ಸಂದಭರ್ದಲ್ಲಿ ಡಿಎಸ್‌ಎಸ್ ಮುಖಂಡ ಜಗದೀಶ್ ಮಾತನಾಡಿ, ಪಟ್ಟಣಗೆರೆ ಗ್ರಾಪಂ ಸದಸ್ಯರೊಬ್ಬರು ಬಿಸಿಎಂ ಎ ವರ್ಗಕ್ಕೆ ಸೇರಿದ್ದರೂ ಪರಿಶಿಷ್ಟ ವರ್ಗದ ನಾಯಕ ಜನಾಂಗಕ್ಕೆ ಸೇರಿದ್ದಾರೆಂಬ ಸುಳ್ಳು ಪ್ರಮಾಣ ಪತ್ರ ನೀಡಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಇದರಿಂದ ನೈಜ ಪರಿಶಿಷ್ಟ ಜನಾಂಗದವರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಅವರ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಲು ಕಳೆದ 9 ತಿಂಗಳಿಂದ ಆಗ್ರಹಿಸಿದರೂ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಹೈಕೋರ್ಟ್ ಕ್ರಮ ಕೈಗೊಳ್ಳಲು ಸೂಚಿಸಿದರೂ ಶಿರಸ್ಥಿದಾರ್ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಕ್ರಮ ಕೈಗೊಂಡಿಲ್ಲ. ಕೂಡಲೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಕಾರಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು. ಡಿಎಸ್‌ಎಸ್ ಸಂಚಾಲಕ ಪಿ.ಎಂ.ಮೂರ್ತಿ, ಸಂಘಟನಾ ಸಂಚಾಲಕ ಕೆ.ಟಿ.ಶ್ರೀನಿವಾಸ್, ತಮ್ಮಯ್ಯ, ಕೊರಚ ಕೊರಮ ಜಾಗೃತಿ ವೇದಿಕೆ ಅಧ್ಯಕ್ಷ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.







