ಸಾಂಪ್ರದಾಯಿಕ ಚಿಕಿತ್ಸೆಯಿಂದ ಕ್ಯಾನ್ಸರ್ ಗುಣವಾಗದು ಕ್ಯಾನ್ಸರ್‌ಗೆ ಬಲಿಯಾದ ನಟ ಜಿಷ್ಣು ರಾಘವನ್
ತಿರುವನಂತಪುರ, ಮಾ.29: ಇತ್ತೀಚಿಗೆ ಕ್ಯಾನ್ಸರ್ ನಿಂದ ಮೃತಪಟ್ಟ ಜನಪ್ರಿಯ ಮಲಯಾಳಂ ನಟ ಜಿಷ್ಣು ರಾಘವನ್ ಒಂದು ಮುಖ್ಯ ಸಂದೇಶ ಬಿಟ್ಟು ಹೋಗಿದ್ದಾರೆ . ಸಾಮಾನ್ಯವಾಗಿ ಕ್ಯಾನ್ಸರ್ ನಂತಹ ಮಾರಕ ರೋಗಪೀಡಿತರಿಗೆ ಅವರ ಬಂಧುಗಳು, ಸ್ನೇಹಿತರು ಹಲವಾರು ಪರ್ಯಾಯ, ಸಾಂಪ್ರದಾಯಿಕ ಚಿಕಿತ್ಸೆಗಳನ್ನು ಸೂಚಿಸುತ್ತಾರೆ. ಹಾಗೇ ಜಿಷ್ಣು ಅವರಿಗೂ ಸೂಚಿಸಿದ್ದರು. ಅವರು ಅದನ್ನು ಮಾಡಿ ನೋಡಿದ್ದಾರೆ. ಆದರೆ ಅದರಿಂದ ಪ್ರಯೋಜನವಾಗಿಲ್ಲ, ಬದಲಾಗಿ ಅಪಾಯ ಎದುರಾಗಿದೆ ಎಂದು ಅವರು ಹೇಳಿದ್ದಾರೆ. ನಿಧನರಾಗುವ ಕೆಲವು ಸಮಯ ಮೊದಲು ಬರೆದ ಟ್ವಿಟರ್ ಮೆಸೇಜ್‌ನಲ್ಲಿ ಇಂತಹ ಪರ್ಯಾಯ, ಸಾಂಪ್ರದಾಯಿಕ ಚಿಕಿತ್ಸೆಗಳಿಂದ ಯಾವುದೇ ಪ್ರಯೋಜನವಿಲ್ಲ, ಈಗ ಕಿಮೋತೆರಪಿಯಂತಹ ಆಧುನಿಕ ವೈದ್ಯ ವಿಜ್ಞಾನದ ಚಿಕಿತ್ಸೆಗೆ ಇವು ಪರ್ಯಾಯವಲ್ಲ ಎಂದು ಅವರು ಹೇಳಿದ್ದಾರೆ . ಅವರು ಬರೆದ ಸಂದೇಶ ಇಲ್ಲಿದೆ: ಸ್ನೇಹಿತರೆ, ನನಗೆ ಲಕ್ಷ್ಮೀ ತಾರು ಹಾಗೂ ಮುಲಥ ರೀತಿಯ ಚಿಕಿತ್ಸೆ ಪಡೆಯಲು ಬಹಳಷ್ಟು ಸಲಹೆಗಳು ಬರುತ್ತಿವೆ... ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯಗೊಳಿಸಲಾಗಿದೆ... ಇದನ್ನು ಮತ್ತು ನನ್ನ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಸೂಚಿಸಿದ ಇಂತಹ ಇತರ ಹಲವು ಖ್ಯಾತ ಪರ್ಯಾಯ ಚಿಕಿತ್ಸೆಗಳನ್ನೂ ಮಾಡಿಸುವ ರಿಸ್ಕ್ ನಾನು ತೆಗೆದುಕೊಂಡೆ ..ಆದರೆ ಅವು ನನ್ನ ಟ್ಯೂಮರ್ ಅನ್ನು ನಿಯಂತ್ರಿಸಲಿಲ್ಲ ಬದಲಾಗಿ ಅವು ನನ್ನನ್ನು ಅತ್ಯಂತ ಅಪಾಯಕಾರಿ ಸ್ಥಿತಿಗೆ ತಂದು ನಿಲ್ಲಿಸಿವೆ ... ಈಗಾಗಲೇ ಸಾಬೀತಾಗಿರುವ ಆಧುನಿಕ ಚಿಕಿತ್ಸೆಗೆ ಪರ್ಯಾಯವಾಗಿ ಈ ಚಿಕಿತ್ಸೆಗಳನ್ನು ನಾನು ಯಾರಿಗೂ ತೆಗೆದುಕೊಳ್ಳಲು ಸಲಹೆ ನೀಡುವುದಿಲ್ಲ.. ಸರಿಯಾದ ಚಿಕಿತ್ಸೆಯ ಬಳಿಕ ಮತ್ತೆ ರೋಗ ಬಾರದಂತೆ ಇವುಗಳನ್ನೂ ಬಳಸಬಹುದೇನೋ.. ಈ ಚಿಕಿತ್ಸೆಗಳ ಬಗ್ಗೆ ಇನ್ನಷ್ಟು ಅಧ್ಯಯನ ಹಾಗೂ ಸಂಶೋಧನೆ ನಡೆದು ಕ್ಯಾನ್ಸರ್‌ಗೆ ಸೂಕ್ತ ಚಿಕಿತ್ಸೆ, ಔಷಧಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.. ದಯವಿಟ್ಟು ಈ ಚಿಕಿತ್ಸೆಗಳನ್ನು ಕಿಮೋತೆರಪಿ ಹಾಗೂ ಇತರ ಆಧುನಿಕ ಚಿಕಿತ್ಸೆಯ ಬದಲು ಪರ್ಯಾಯವಾಗಿ ಯಾರಿಗೂ ಸೂಚಿಸಿ ದಾರಿತಪ್ಪಿಸಬೇಡಿ...ಅದು ಅತ್ಯಂತ ಅಪಾಯಕಾರಿ... ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಆಗಿ ಬಂದ ಮೆಸೇಜುಗಳನ್ನು ಕುರುಡಾಗಿ ನಂಬಬೇಡಿ... ಕೆಲವು ತಿಂಗಳ ಹಿಂದೆ ನಾನು ಸತ್ತು ಹೋದೆ ಎಂದೇ ಸಂದೇಶ ಹರಡಿತ್ತು.ಆದರೆ ನಾನು ಈಗ ನಿಮಗೆ ಮೆಸೇಜ್ ಮಾಡುತ್ತಿದ್ದೇನೆ.





