ಸಹಾರ ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಆದೇಶ
ಹೊಸದಿಲ್ಲಿ, ಮಾ.29: ಸುಬ್ರತ ರಾಯ್ ಹಾಗೂ ಇತರಿಬ್ಬರು ಕಂಪೆನಿ ನಿರ್ದೇಶಕರ ಬಿಡುಗಡೆಗಾಗಿ ರೂ. 10 ಸಾವಿರ ಕೋಟಿ ಎತ್ತುವಳಿ ಮಾಡಲು ಸಹರಾ ಗ್ರೂಪ್‌ನ ಆಸ್ತಿಗಳನ್ನು ಮಾರಾಟ ಮಾಡಲು ಆರಂಭಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಸೆಬಿಗೆ ನಿರ್ದೇಶನ ನೀಡಿದೆ.
ಸಹರಾಕ್ಕೆ ಸೇರಿರುವ ರೂ. 40 ಸಾವಿರ ಕೋಟಿಯ ಆಸ್ತಿಗಳನ್ನು ಮಾರಾಟ ಮಾಡಬಲ್ಲ ಸ್ವತಂತ್ರ ಏಜೆನ್ಸಿಯೊಂದನ್ನು ನೇಮಿಸಿಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ಪೀಠ ಅದಕ್ಕೆ ಸೂಚಿಸಿದೆ.
ಒಟ್ಟಾರೆ ನಿಗದಿತ ವೌಲ್ಯದ ಶೇ.90ಕ್ಕಿಂತ ಕಡಿಮೆಗೆ ಬಿಡ್‌ಗಳು ಬಂದರೆ ಸಹಾರದ ಆಸ್ತಿಗಳನ್ನು ಮಾರಬಾರದೆಂದೂ ಪೀಠ ಸ್ಪಷ್ಟಪಡಿಸಿದೆ.
ಲಕ್ಷಾಂತರ ಸಣ್ಣ ಹೂಡಿಕೆದಾರರಿಂದ ಸಂಗ್ರಹಿಸಿದ್ದ ಹಣವನ್ನು ಮರುಪಾವತಿ ಮಾಡಬೇಕೆಂಬ ನ್ಯಾಯಾಲಯದ ಆದೇಶವೊಂದನ್ನು ಪಾಲಿಸಲು ಕಂಪೆನಿ ವಿಫಲವಾದ ಬಳಿಕ, 2014ರ ಮಾರ್ಚ್‌ನಲ್ಲಿ ಸುಬ್ರತ ರಾಯ್‌ರವರನ್ನು ಬಂಧಿಸಲಾಗಿತ್ತು. ತನ್ನ ಬಿಡುಗಡೆಗೆ ರೂ. 5 ಸಾವಿರ ಕೋಟಿ ನಗದು ಹಾಗೂ ಅಷ್ಟೇ ಮೊತ್ತದ ಬ್ಯಾಂಕ್ ಗ್ಯಾರಂಟಿಯನ್ನು ವ್ಯವಸ್ಥೆಗೊಳಿಸಲು ವಿಫಲರಾದ ಕಾರಣ ರಾಯ್, ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರಾಗೃಹದಲ್ಲಿದ್ದಾರೆ.
ಸಹಾರದ ಆಸ್ತಿಗಳ ಮಾರಾಟ ಪ್ರಕ್ರಿಯೆ ಮುಂದಿನ ವಾರ ಆರಂಭವಾಗುವ ಸಾಧ್ಯತೆಯಿದೆ.





