ಕಾರ್ಯಕ್ರಮಕ್ಕೆ ಜೆಎನ್‌ಯು ಪ್ರೊಫೆಸರ್‌ಗೆ ಆಹ್ವಾನ : ಜಾರ್ಖಂಡ್ ವಿವಿಯ ಉಪನ್ಯಾಸಕಿಯ ಅಮಾನತು

ರಾಂಚಿ,ಮಾ.29: ಜವಾಹರಲಾಲ್ ನೆಹರೂ ವಿವಿಯ ಉಪನ್ಯಾಸಕರೊಬ್ಬರನ್ನು ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿದಕ್ಕಾಗಿ ಜಾರ್ಖಂಡ್ ವಿವಿಯ ಪ್ರೊಫೆಸರ್ ಶ್ರೇಯಾ ಭಟ್ಟಾಚಾರ್ಜಿ ಅವರನ್ನು ಅಮಾನತುಗೊಳಿಸಲಾಗಿದೆ.
ಇತ್ತೀಚೆಗೆ ಜಾರ್ಖಂಡ್ ವಿವಿಯಲ್ಲಿ ನಡೆದ ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಜೆಎನ್‌ಯು ಪ್ರೊಫೆಸರ್ ಎಂ.ಎನ್.ಪಾಣಿನಿ ಅವರನ್ನು ಆಹ್ವಾನಿಸುವ ಮೂಲಕ ಶ್ರೇಯಾ ಭಟ್ಟಾಚಾರ್ಜಿ ಅವರು ಶಿಕ್ಷಣಸಂಸ್ಥೆಯ ವರ್ಚಸ್ಸಿಗೆ ಕಳಂಕ ತಂದಿದ್ದಾರೆಂದು ವಿವಿಯ ಆಡಳಿತ ಮಂಡಳಿ ಆರೋಪಿಸಿದೆ.
ಪ್ರೊಫೆಸರ್ ಪಾಣಿನಿ, ಇತ್ತೀಚೆಗೆ ಜೆಎನ್‌ಯುನಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಶಾಮೀಲಾದ ಕೆಲವು ವಿದ್ಯಾರ್ಥಿಗಳ ಗುಂಪಿನ ಮಾರ್ಗದರ್ಶಕರಾಗಿದ್ದರೆಂದು ಜಾರ್ಖಂಡ್ ವಿವಿಯು ಶ್ರೇಯಾ ಭಟ್ಟಾರ್ಜಿ ಅವರನ್ನು ಅಮಾನತುಗೊಳಿಸುವ ಆದೇಶಪತ್ರದಲ್ಲಿ ವಿವರಿಸಿದೆ.
ಪಾಣಿನಿಯವರ ಹಿನ್ನೆಲೆಗಳನ್ನು ದೃಢಪಡಿಸಿಕೊಳ್ಳದೆ ಅವರನ್ನು ಡಾ.ಭಟ್ಟಾಚಾರ್ಜಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಇದರಿಂದಾಗಿ ಕಾರ್ಯಕ್ರಮದ ಮುಖ್ಯಅತಿಥಿಯಾಗಿದ್ದ ರಾಜ್ಯಪಾಲೆ ದ್ರೌಪದಿ ಮುರ್ಮು , ಸಭೆಯಲ್ಲಿ ಪಾಲ್ಗೊಳ್ಳಲಿಲ್ಲವೆಂದು ಪತ್ರವು ಹೇಳಿದೆ.
‘‘ ಪ್ರೊಫೆಸರ್ ಪಾಣಿನಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲೆ ಸಭೆಯಿಂದ ದೂರವುಳಿದಿರಬೇಕೆಂದು ನಮಗೆ ಸಂದೇಹವಿದೆ. ಈ ಘಟನೆಗೆ ಸಂಬಂಧಿಸಿ ತನಿಖಾ ಸಮಿತಿಯನ್ನು ರಚಿಸಲಾಗಿದೆ’’ ಜಾರ್ಖಂಡ್ ವಿವಿ ಉಪಕುಲಪತಿ ನಂದಕುಮಾರ್ ಯಾದವ್ ತಿಳಿಸಿದ್ದಾರೆ.







