ಭಾವನಾತ್ಮಕ ವಿಚಾರಗಳನ್ನಷ್ಟೇ ಹುಟ್ಟುಹಾಕುತ್ತಾ...
ರಾಷ್ಟ್ರವಾದ ಬಲಗೊಳ್ಳುತ್ತಿರುವ ಈ ಸಂದರ್ಭದಲ್ಲಿ ದೇಶಭಕ್ತಿಯನ್ನು ವ್ಯಕ್ತಪಡಿಸಲು ಇರುವ ಏಕ ಮಾತ್ರ ಮಾರ್ಗ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುವುದು. ಪ್ರಸ್ತುತ ಸರಕಾರ ತನ್ನ ವಿರುದ್ಧ ಧ್ವನಿ ಎತ್ತಿದವರನ್ನು ರಾಷ್ಟ್ರದ್ರೋಹಿಗಳೆಂದು ಗುರುತಿಸುತ್ತಿರುವುದು ಇತ್ತೀಚಿನ ಬೆಳವಣಿಗೆ. ಇತ್ತೀಚಿನ ದಿನಗಳಲ್ಲಿ ಈ ಎರಡು ವಿಚಾರಗಳನ್ನು ಮುಂದಿಟ್ಟುಕೊಂಡು ದೇಶದ ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಗೆ ಧಕ್ಕೆ ಉಂಟು ಮಾಡಲಾಯಿತು. ಈ ಎಲ್ಲಾ ಪ್ರಯತ್ನಗಳು ಸರಕಾರ ಚುನಾವಣೆ ಪೂರ್ವದಲ್ಲಿ ನೀಡಿದ ಆಶ್ವಾಸನೆಗಳನ್ನು ಅಪೂರ್ಣಗೊಳಿಸಿ, ತನ್ನ ಕಾರ್ಯವೈಖರಿಯನ್ನು ಮರೆಮಾಚಲು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆದ ಅಪಮಾನವೆನ್ನುವ ಹೊಸ ವಾದವನ್ನು ಮುಂದಿಡುತ್ತಿರುವುದು ಸ್ಪಷ್ಟವಾಗುತ್ತದೆ. ಈಗಾಗಲೇ ದೇಶ ಹೊಂದಿರುವ ಅನೇಕ ಜಾತಿಯಾಧಾರಿದ ಭಾವನಾತ್ಮಕ ಅಂಶಗಳಿಗೆ ಈ ವಿಚಾರಗಳು ಹೊಸ ಸೇರ್ಪಡೆಯಾಗಿವೆ. ಆರೆಸ್ಸೆಸ್‌ನ ಉನ್ನತ ಸ್ಥಾನದಲ್ಲಿರುವ ಮೋಹನ್ ಭಾಗವತರು ಮಾರ್ಚ್ 2016ರಲ್ಲಿ ಒಂದು ಹೇಳಿಕೆ ನೀಡಿದ್ದರು.
ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ ಹೊಸ ತಲೆಮಾರಿಗೆ ಭಾರತ್ ಮಾತಾ ಕಿ ಜೈ ಕೂಗಿ ಎಂದು ತಿಳಿಸಬೇಕು ಎಂದರು. ಈ ಮಾತಿನಿಂದ ಉದ್ರೇಕಗೊಂಡ ಎಂಐಎಂನ ನಾಯಕ ಮತ್ತು ಹೈದರಾಬಾದ್ ಎಂಪಿಯಾಗಿರುವ ಅಸದುದ್ದೀನ್ ಉವೈಸಿ ತಾನು ಈ ಘೋಷಣೆ ಕೂಗುವುದಿಲ್ಲ. ವೈಯಕ್ತಿಕವಾಗಿ ಈ ಘೋಷಣೆ ಕೂಗುವುದರಿಂದ ತನಗೇನು ತೊಂದರೆ ಇಲ್ಲ ಆದರೂ ತಾನು ಈ ಘೋಷಣೆ ಕೂಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಉವೈಸಿಯ ಈ ವಾದ ಮೋಹನ್ ಭಾಗವತರ ಮಾತಿಗೆ ಸಾಮ್ಯ ಮತ್ತು ವಿರುದ್ಧವಾಗಿರುವುದನ್ನು ಗಮನಿಸಬಹುದು.
ಕೆಲ ಮುಸ್ಲಿಂ ಪಂಗಡಗಳು ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಭಾರತ ಮಾತೆಗೆ ತಲೆಬಾಗಿ ನೀಡುವ ಗೌರವ ಎಂದು ಅರ್ಥೈಸುತ್ತಾರೆ ಮತ್ತು ಈ ಕ್ರಿಯೆ ಅವರ ಇಸ್ಲಾಂ ಧರ್ಮಕ್ಕೆ ವಿರುದ್ಧ ಎಂದು ಭಾವಿಸುತ್ತಾರೆ. ಅನೇಕ ಮುಸ್ಲಿಮರು ಈ ಘೋಷಣೆಗಳನ್ನು ಒಪ್ಪುವುದಿಲ್ಲ. ಏಕೆಂದರೆ ಭಾರತ್ ಮಾತಾ ಕಿ ಜೈ ಎನ್ನುವ ಘೋಷಣೆ ವಂದೇ ಮಾತರಂನ ಮುಂದುವರಿದ ಭಾ. ಈ ಸಾಲುಗಳು ಬಲಪಂಥೀಯ ರಾಜಕೀಯ ವಾದ ಮತ್ತು ಮುಸ್ಲಿಮರ ಧರ್ಮದೆಡೆಗಿರುವ ತೀವ್ರ ಅಸಹನೆಯ ದ್ಯೋತಕವಾಗಿದೆ. 1992-93ರ ಸಂದರ್ಭದಲ್ಲಿ ಮುಂಬೈ ನಗರದಲ್ಲಿ ನಡೆದ ಶಾಂತಿ ನಡಿಗೆಯಲ್ಲಿ ಭಾಗವಹಿಸಿದ ಅನೇಕ ಮುಸ್ಲಿಮರನ್ನು ವಂದೇ ಮಾತರಂ ಪಠಿಸುವಂತೆ ಶಿವಸೇನೆ ಒತ್ತಾಯಿಸಿತು. ಶಿವಸೇನೆಯ ಪ್ರಕಾರ ಭಾರತ ದೇಶದಲ್ಲಿ ಇರುವುದಾದರೆ ವಂದೇ ಮಾತರಂ ಹೇಳಲೇಬೇಕು (ಇಸ್ ದೇಶ್‌ಮೆ ರೆಹನಾಹೋತೋ ವಂದೇ ಮಾತರಂ ಕೆಹೆನಾ ಹೋಗಾ.)
ವಂದೇ ಮಾತರಂ ಗೀತೆಗೆ ವಿವಾದಾತ್ಮಕ ಇತಿಹಾಸವಿದೆ. ಬಕಿಮ್ ಚಂದ್ರ ಚಟರ್ಜಿಯವರ ರಚನೆ ಈ ಗೀತೆ ಮತ್ತು ಅವರು ಅವರ ಪ್ರಸಿದ್ಧ ಕಾದಂಬರಿ ಆನಂದ ಮಠ ಕೃತಿಯಲ್ಲಿ ಇದನ್ನು ಸೇರಿಸಿಕೊಂಡರು. ಈ ಕಾದಂಬರಿ ಮುಸ್ಲಿಂ ಧರ್ಮದ ವಿರುದ್ಧ ಅನೇಕ ವಾದಗಳನ್ನು ಒಳಗೊಂಡಿದೆ. ಕೆಲವರು ಈ ಗೀತೆಯನ್ನು ಒಪ್ಪಿಕೊಂಡರು ಹಾಗೂ ಈ ಗೀತೆ ಪ್ರಸಿದ್ಧಿಯನ್ನು ಪಡೆಯಿತು. ಆದರೆ ಮುಸ್ಲಿಮ್ ಲೀಗ್ ಈ ಗೀತೆಯನ್ನು ತೀವ್ರವಾಗಿ ವಿರೋಧಿಸಿತ್ತು. ಈ ಗೀತೆ ಭಾರತ ದೇಶವನ್ನು ಹಿಂದೂ ದೇವತೆ ದುರ್ಗಾದೇವಿಗೆ ಹೋಲಿಸುತ್ತದೆ ಆದರೆ ಮುಸ್ಲಿಂ ಧರ್ಮ ಏಕದೇವತಾ ವಾದವನ್ನು ಪ್ರತಿಪಾದಿಸುತ್ತದೆ. ಅಲ್ಲಾಹನ ಹೊರತಾಗಿ ಇದು ಬೇರೆ ಯಾವ ದೇವ, ದೇವತೆಗಳನ್ನು ನಂಬುವುದಿಲ್ಲ. ಇದು ಕೇವಲ ಮುಸ್ಲಿಮರ ವಾದವಷ್ಟೇ ಅಲ್ಲ ಇತರ ಅನೇಕ ಏಕದೇವತಾ ವಾದವನ್ನು ಪ್ರತಿಪಾದಿಸುವ ಧರ್ಮಗಳು ವಂದೇ ಮಾತರಂ ಗೀತೆಯನ್ನು ಒಪ್ಪುವುದಿಲ್ಲ.
1937ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ನೆಹರೂ, ವೌಲಾನ ಅಬುಲ್ ಕಲಾಂ ಒಳಗೊಂಡ ರಾಷ್ಟ್ರಗೀತೆ ಕಮಿಟಿ ಜನಗಣ ಮನ ಗೀತೆಯನ್ನು ರಾಷ್ಟ್ರ ಮಂತ್ರ ಎಂದು ಮತ್ತು ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆ ಎಂದು ಘೋಷಿಸಿತು. ಹಾಗೂ ವಂದೇ ಮಾತರಂ ಗೀತೆಯಿಂದ ಕೇವಲ ಎರಡು ಪ್ಯಾರಾಗಳಷ್ಟೆ ರಾಷ್ಟ್ರಗೀತೆಗೆ ಬಳಸಿಕೊಂಡಿತು. ಉಳಿದ ಪ್ಯಾರಾಗಳಲ್ಲಿ ಹಿಂದೂ ದೇವಿಯರ ವರ್ಣನೆ ಇದ್ದುದರಿಂದ ಅವುಗಳನ್ನು ರಾಷ್ಟ್ರಗೀತೆಯಿಂದ ಕೈ ಬಿಡಲಾಯಿತು.
ಭಾರತ ಸ್ವಾತಂತ್ರ ಸಂಗ್ರಾಮದ ಸಂದರ್ಭದಲ್ಲಿ ಭಾರತ್ ಮಾತಾ ಕಿ ಜೈ ಎನ್ನುವ ಘೋಷಣೆ ಅನೇಕರಲ್ಲಿ ದೇಶಭಕ್ತಿಯ ಕಿಚ್ಚು ಮೂಡಿಸಿತ್ತು. ಹಾಗೆಯೇ ಈ ಘೋಷಣೆಗಳ ಪಟ್ಟಿಯಲ್ಲಿ ಜೈ ಹಿಂದ್, ಇಂಕ್ವಿಲಾಬ್ ಜಿಂದಾಬಾದ್, ಹಿಂದುಸ್ಥಾನ್ ಜಿಂದಾಬಾದ್, ಅಲ್ಲಾಹು ಅಕ್ಬರ್ ಕೂಡ ಇದ್ದವು. ಆದರೆ ಈ ಎಲ್ಲಾ ಘೋಷಣೆಗಳನ್ನು ಎಲ್ಲಾ ಪಂಗಡದವರು ಸಮಾನವಾಗಿ ಸ್ವೀಕರಿಸಲಿಲ್ಲ. ಮುಸ್ಲಿಮರು ಇದನ್ನು ಪಠಿಸುತ್ತಿರಲಿಲ್ಲ. ಆದರೆ ಇನ್ನು ಅನೇಕರಿಗೆ ಇದರಿಂದ ಯಾವುದೇ ತಕರಾರಿರಲಿಲ್ಲ. ಇದಕ್ಕೆ ಸೂಕ್ತ ಉದಾಹರಣೆ ಎ.ಆರ್.ರೆಹಮಾನ್. ಇವರು ವಂದೇ ಮಾತರಂ ಗೀತೆಗೆ ಸುಮಧುರವಾಗಿ ರಾಗ ಸಂಯೋಜನೆ ಮಾಡಿದ್ದಾರೆ. ಜಾವೆದ್ ಅಖ್ತರ್ ರಾಜ್ಯಸಭೆಯಲ್ಲಿ ಉವೈಸಿಯ ಭಾರತ್ ಮಾತಾ ಕಿ ಜೈ ಘೋಷಣೆಯ ಅಭಿಪ್ರಾಯವನ್ನು ಖಂಡಿಸಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರು. ಆದರೆ ಈ ಸಂದರ್ಭದಲ್ಲಿ ಅಖ್ತರ್ ಈ ತೆರನಾಗಿ ಒತ್ತಾಯ ಪೂರ್ವಕವಾಗಿ ಘೋಷಣೆಗಳನ್ನು ಕೂಗಿಸುವುದು ಎಷ್ಟು ಸಮಂಜಸ ಎನ್ನುವ ಕುರಿತು ಗಮನ ಹರಿಸದಿರುವುದು ಚಿಂತನಾರ್ಹ. ಈ ಚರ್ಚೆಯಲ್ಲಿ ಪಾಲ್ಗೊಂಡವರು ಬಿಜೆಪಿ ಮತ್ತು ಆರೆಸ್ಸೆಸ್ ಬಣದಲ್ಲಿದ್ದರೆ, ಎಂಐಎಂ ಮತ್ತೊಂದು ಬಣ. ಈ ಎರಡೂ ಬಣಗಳು ತಮ್ಮದೇ ರಾಜಕೀಯ ತಂತ್ರವನ್ನು ಚಲಾಯಿಸಿ ಸಮಾಜದಲ್ಲಿ ಭಿನ್ನತೆ ಒಡಕನ್ನು ತರುವ ಕಾರ್ಯ ರೂಪಿಸಿದ್ದು ಮಾತ್ರ ಸ್ಪಷ್ಟವಾಗಿತ್ತು.
ದೇಶಭಕ್ತಿಯ ಘೋಷಣೆಗಳನ್ನು ಪಠಿಸಲು ನೀಡಿದ ಸಂದೇಶ ಮುಂದೊಂದು ದಿನ ಜೆಎನ್‌ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ದೇಶವಿರೋಧಿಗಳು ಎಂದು ಘೋಷಿಸುವ ಹಂತ ತಲುಪಿತು.ಅಫ್ಝಲ್ ಗುರು ಮರಣದಂಡನೆಯನ್ನು ವಿರೋಧಿಸಿ ಜೆಎನ್‌ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮ ವಿವಾದಕ್ಕೆ ಮೂಲ ಕಾರಣವಾಯಿತು. ಈ ವಿಷಯದ ಸುತ್ತ ಗಮನಿಸಬೇಕಾದ ಅನೇಕ ಆಯಾಮಗಳಿವೆ. 370ನೆ ವಿಧಿಯಡಿ ಕಾಶ್ಮೀರಕ್ಕೆ ದೊರೆಯಬೇಕಾದ ಸಾರ್ವಭೌಮತ್ವ ಮತ್ತು ಆ ಒಡಬಡಿಕೆ ಪರವಾಗಿ ದನಿ ಎತ್ತಿದ ವಿದ್ಯಾರ್ಥಿಗಳು ಬೈಠಕ್‌ನಲ್ಲಿದ್ದರು. ಮತ್ತು ಇದೇ ಬೈಠಕ್‌ನಲ್ಲಿ ಮುಖವಸ್ತ್ರ ಧರಿಸಿ ವಿವಾದಾತ್ಮಕ ಘೋಷಣೆಗಳನ್ನು ಕೂಗುತ್ತಿದ್ದ ಕೆಲ ವಿದ್ಯಾರ್ಥಿಗಳಿದ್ದರು. ವಿಚಾರಣೆಯಲ್ಲಿ ಬಳಸಿದ್ದ ಸಿಡಿಯಲ್ಲಿ ಕನ್ಹಯ್ಯಾ ಕುಮಾರ್‌ನನ್ನು ಹೋಲುವ ವಿದ್ಯಾರ್ಥಿಗಳು ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದರು. ಆ ಸಿಡಿಗಳು ಬದಲಾವಣೆಗೊಳಪಟ್ಟಿದ್ದವು ಮತ್ತು ನಕಲಿ ಸಿಡಿಗಳಾಗಿದ್ದವು.
ಇಲ್ಲಿ ಗಮನಿಸಬೇಕಾದ ಎರಡು ಅಂಶಗಳಿವೆ. ಮೊದಲನೆಯದು ಯಾರು ಈ ಸೀಡಿಗಳನ್ನು ಬದಲಾಯಿಸಿದರು? ಮತ್ತು ಬೈಠಕ್‌ನಲ್ಲಿ ಮುಖಮರೆಸಿಕೊಂಡು ಹಾಜರಿದ್ದವರು ಯಾರು? ಎನ್ನುವ ಕುರಿತು ವಿಚಾರಣೆ ಕೈಗೊಳ್ಳದಿರುವುದು ದೇಶವಿರೋಧಿ ಘೋಷಣೆಗಳ ನೆಪದಲ್ಲಿ ಜೆಎನ್‌ಯು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ದೇಶ ವಿರೋಧಿಗಳೆಂದು ಮತ್ತು ಜೆಎನ್‌ಯು ವಿಶ್ವವಿದ್ಯಾನಿಲಯವನ್ನು ರಾಷ್ಟ್ರ ವಿರೋಧಿ ತಾಣವೆಂದು ಗುರುತಿಸಿದ್ದು ಸರಕಾರ ಮತ್ತು ಬಿಜೆಪಿ ಮಾಡಿದ ಷಡ್ಯಂತ್ರದಂತೆ ಭಾಸವಾಗುತ್ತದೆ. ವಿಶೇಷವೆಂದರೆ ಸರಕಾರ ತನ್ನ ವಿರುದ್ಧ, ವ್ಯವಸ್ಥೆಯ ವಿರುದ್ಧ ಪ್ರಶ್ನಿಸುವವರನ್ನು ದೇಶವಿರೋಧಿ ವಾದದ ಅಡಿಯಲ್ಲಿ ಅವರ ದನಿಯನ್ನಡಗಿಸು ತ್ತಿರುವುದು ವ್ಯವಸ್ಥೆಯ ಆಷಾಡ ಭೂತಿತನವನ್ನು ತೆರೆದಿಡುತ್ತದೆ. ಮತ್ತೊಂದೆಡೆ ಭಾರತ ಸರಕಾರ ಕಾಶ್ಮೆರದ ಸರಕಾರದೊಡನೆ ಮೈತ್ತಿ ಸಾಧಿಸಿ ಸಮ್ಮಿಶ್ರ ಸರಕಾರ ರಚಿಸುತ್ತಿದೆ. ಆದರೆ ಮುಹಮ್ಮದ್ ಮುಫ್ತಿಯ ಸರಕಾರ ಅಫ್ಝಲ್ ಗುರುವನ್ನು ದೇಶಭಕ್ತ ಮತ್ತು ಬಲಿದಾನಗೈದ ವೀರಯೋಧನಂತೆ ನಡೆಸಿಕೊಳ್ಳುತ್ತದೆ. ಮತ್ತೊಂದೆಡೆ ಭಾರತ ಸರಕಾರ ಕಾಶ್ಮೆರಕ್ಕೆ ದೊರೆಯಬೇಕಾದ ಸಾರ್ವಭೌಮತ್ವ, ಅಫ್ಝಲ್‌ಗುರು ಮರಣದಂಡನೆ ವಿಚಾರಗಳನ್ನು ಮಾತ್ರ ದೇಶ ವಿರೋಧಿ ವಿಷಯಗಳಾಗಿ ಪರಿಗಣಿಸುತ್ತದೆ. ಜೆಎನ್‌ಯು ವಿಶ್ವವಿದ್ಯಾನಿಲಯದಲ್ಲಿ ಮೊಳಗಿದ ಘೋಷಣೆಗಳನ್ನು ವಿವಾದಾತ್ಮಕ ದೇಶವಿರೋಧಿ ಎಂದು ಪರಿಗಣಿಸುವುದಾದರೆ, ಈ ಘೋಷಣೆಗಳು ಕಾಶ್ಮೀರಿ ಜನಜೀವನದ ಭಾಗವಾಗಿವೆ. ಬಿಜೆಪಿ ಅಕಾಲಿದಳದೊಂದಿಗೂ ಮೈತ್ರಿ ಸಾಧಿಸಿದ್ದು ಅಕಾಲಿದಳ ಆನಂದ ಪುರವನ್ನು ಸಿಖ್ಖರ ರಾಜ್ಯ ಖಲಿಸ್ಥಾನವೆಂದು ಘೋಷಿಸಿಕೊಂಡಿದೆ.
ಉತ್ತರ ಪೂರ್ವ ಭಾರತದ ಏಕೀಕರಣದ ಸಂದರ್ಭದಲ್ಲಿ ದೇಶ ಎದುರಿಸಿದ ಅನೇಕ ಭಾವನಾತ್ಮಕ ಮತ್ತು ಭೌಗೋಳಿಕ ಘಾಸಿಯನ್ನು ನಾವು ಮರೆಯುವಂತಿಲ್ಲ. ಈ ಸಂದರ್ಭದಲ್ಲಿ ದೇಶವಿರೋಧಿ ಚಟುವಟಿಕೆ ವಿಧಿಯನ್ನು ಪುನರಾವಲೋಕಿಸುವುದು ಮತ್ತು ದೇಶವಿರೋಧಿ ವಾದ ಬಲಗೊಳಿಸುತ್ತಿರುವುದು ಭಾವನಾತ್ಮಕ ವಿವಾದಗಳನ್ನು ಹುಟ್ಟು ಹಾಕುತ್ತದೆ. ಹೀಗಿರುವಾಗ ಬಿಜೆಪಿ ಇತ್ತ ದಿಲ್ಲಿಯ ವಾತಾವರಣವನ್ನು ಹಾಳುಗೆಡವುತ್ತದೆ ಮತ್ತು ಇತ್ತ ಸಂವಿಧಾನ ಪರವಿರುವ ಪಕ್ಷಗಳೊಂದಿಗೆ ಕೈ ಜೋಡಿಸಿ ತನ್ನ ಆಷಾಢಭೂತಿತನವನ್ನು ತೋರುತ್ತಿದೆ. ಈ ಎಲ್ಲದರಿಂದ ಸ್ಪಷ್ಟವಾಗುವ ಅಂಶವೆಂದರೆ ಆರೆಸ್ಸೆಸ್ ಮತ್ತು ಬಿಜೆಪಿ ಮೂಲ ಉದ್ದೇಶವನ್ನು ಭಾವನಾತ್ಮಕ ನೆಲೆಯಲ್ಲಿ ಒಡೆಯುವುದು ಮತ್ತು ಸಾಮಾಜಿಕ ಭಿನ್ನತೆಯನ್ನುಂಟುಮಾಡುವುದು. ಈ ನಿಟ್ಟಿನಲ್ಲಿ ಆರೆಸ್ಸೆಸ್ ಹಿಂದೂದೇಶ, ಹಿಂದೂ ಸಮಾಜ ಕಟ್ಟುವಲ್ಲಿ ತನ್ನದೇ ತಂತ್ರಗಳಾದ ಹಿಂದೂ ರಾಜರ ಸಾಹಸ ಗಾಥೆ, ಹಿಂದೂ ದೇವಸ್ಥಾನಗಳ ಧ್ವಂಸ ಕಥನ, ಗೋವಧೆ, ಗೋಮಾಂಸ ಭಕ್ಷಣೆ, ಲವ್‌ಜಿಹಾದ್, ಘರ್ ವಾಪ್ಸಿ , ರಾಮಮಂದಿರದಂತಹ ಭಾವನಾತ್ಮಕ ಅಂಶಗಳನ್ನು ಬಳಸಿಕೊಂಡಿತು. ಆದರೆ ಈಗ ಈ ಸಾಲಿನಲ್ಲಿ ದೇಶ ವಿರೋಧ ವಾದ ಮತ್ತು ಭಾರತ್ ಮಾತಾಕಿ ಜೈ ಎನ್ನುವ ಘೋಷಣೆ ಹೊಸ ಸೇರ್ಪಡೆಗಳಾಗಿವೆ .
ಭಾವನಾತ್ಮಕ ವಿಚಾರಗಳನ್ನು ಜೀವಂತವಾಗಿರಿಸುವ ಮೂಲಕ ಸಮಾಜವನ್ನು ಭಿನ್ನಗೊಳಿಸುವುದು ಮಾತ್ರ ನಿರಂತರವಾಗಿ ಸಾಗಿದ್ದು, ನೈಜ ಸಮಾಜ ಪರ ಬದಲಾವಣೆಗೊಳ ಪಡಬೇಕಾದ ವಿಚಾರಗಳನ್ನು ಮೂಲೆಗುಂಪು ಗೊಳಿಸಲಾಗುತ್ತಿದೆ. ಕೇವಲ ಭಾವನಾತ್ಮಕ ವಿಚಾರಗಳತ್ತ ಜನರ ಗಮನ ಸೆಳೆಯುತ್ತಾ ಸಮಾಜದಲ್ಲಿ ಬದಲಾವಣೆ ಅಗತ್ಯವಿರುವ ವಿಚಾರಗಳನ್ನು ಮರೆಮಾಚಲಾಗುತ್ತಿದೆ. ಪ್ರಸ್ತುತ ಸಮಾಜದ ಸ್ಥಿತಿಗತಿಗಳನ್ನು ಪ್ರಶ್ನಿಸಿದ ಮತ್ತು ಬದಲಾವಣೆಗೆ ಆಗ್ರಹಿಸಿದ ವೇಮುಲಾ ಮತ್ತು ಕನ್ಹಯ್ಯಿಕುಮಾರ್‌ನಂತಹವರು ದಲಿತರು, ರೈತರ ಆತ್ಮಹತ್ಯೆ, ಮೋದಿ ಸರಕಾರದ ವಚನ ಭ್ರಷ್ಟತೆಯನ್ನು ಪ್ರಶ್ನಿಸಿದ್ದರು. ಆದರೆ ಭಾರತ್ ಮಾತಾ ಕಿ ಜೈ ಎನ್ನುವ ಭಾವನಾತ್ಮಕ ಕೂಗು ವೇಮುಲಾನ ನೆನಪನ್ನು ಜನರ ಮನಸ್ಸಿನಿಂದ ದೂರವಿರಿಸಿದೆ.
1937ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ನೆಹರೂ, ವೌಲಾನ ಅಬುಲ್ ಕಲಾಂ ಒಳಗೊಂಡ ರಾಷ್ಟ್ರಗೀತೆ ಕಮಿಟಿ ಜನಗಣ ಮನ ಗೀತೆಯನ್ನು ರಾಷ್ಟ್ರ ಮಂತ್ರ ಎಂದು ಮತ್ತು ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆ ಎಂದು ಘೋಷಿಸಿತು. ಹಾಗೂ ವಂದೇ ಮಾತರಂ ಗೀತೆಯಿಂದ ಕೇವಲ ಎರಡು ಪ್ಯಾರಗಳಷ್ಟೆ ರಾಷ್ಟ್ರಗೀತೆಗೆ ಬಳಸಿಕೊಂಡಿತು. ಉಳಿದ ಪ್ಯಾರಗಳಲ್ಲಿ ಹಿಂದೂ ದೇವಿಯರ ವರ್ಣನೆ ಇದ್ದುದರಿಂದ ಅವುಗಳನ್ನು ರಾಷ್ಟ್ರಗೀತೆಯಿಂದ ಕೈ ಬಿಡಲಾಯಿತು.