ಇದು ರಾಷ್ಟ್ರಪ್ರಶಸ್ತಿ ಅಲ್ಲ; ಬಿಜೆಪಿ ಪ್ರಶಸ್ತಿ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಬಗ್ಗೆ ನಿರ್ದೇಶಕ ಗುರ್ವಿಂದರ್ ಸಿಂಗ್
ಹೊಸದಿಲ್ಲಿ, ಮಾ.29: ವಿವಾದಗಳ ಸರಣಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇದೀಗ ಹೊಸ ಸೇರ್ಪಡೆ. ಅಂತಾರಾಷ್ಟ್ರೀಯ ಮನ್ನಣೆ ಪಡೆದ ಪಂಜಾಬಿ ಚಿತ್ರ ಗುರ್ವೀಂದರ್ ಸಿಂಗ್ ಅವರ ಚೌತಿ ಕೂಟ್ ಚಿತ್ರಕ್ಕೆ ಪಂಜಾಬಿ ಭಾಷೆಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಂದಿದೆ. ಆದರೆ ವಾಣಿಜ್ಯ ಚಿತ್ರಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಪ್ರಾದೇಶಿಕ ಚಿತ್ರಗಳನ್ನು ಈ ವರ್ಷ ನಿರ್ಲಕ್ಷಿಸಲಾಗಿದೆ, ಚಿತ್ರ ಪ್ರಶಸ್ತಿ ಎನ್ನುವುದು ದೊಡ್ಡ ಪ್ರಹಸನ ಎಂದು ಅವರು ಲೇವಡಿ ಮಾಡಿದ್ದಾರೆ.
ಪ್ರತಿಷ್ಠಿತ ಕ್ಯಾನೆಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಸಿಂಗಾಪುರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವು ಉತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದ ಚೌತಿ ಕೂಟ್‌ಗೆ ಸೋಮವಾರ ಪ್ರಕಟಿಸಿದ 63ನೆ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳ ಪೈಕಿ ಉತ್ತಮ ಪಂಜಾಬಿ ಭಾಷಾ ಚಿತ್ರ ಪ್ರಶಸ್ತಿಯಷ್ಟೇ ದಕ್ಕಿದೆ.
ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯನ್ನು ನಾನು ನಿರೀಕ್ಷಿಸಿದ್ದೆ ಎಂದು ಸಿಂಗ್ ಹೇಳುತ್ತಾರೆ. ಎಲ್ಲ ಪ್ರಮುಖ ಪ್ರಶಸ್ತಿಗಳು ಕಮರ್ಷಿಯಲ್ ಚಿತ್ರಗಳ ಪಾಲಾಗಿವೆ. ಬಾಹುಬಲಿ ಚಿತ್ರ ಲದ್ದಿ. ಅದಕ್ಕೆ ರಾಷ್ಟ್ರಪ್ರಶಸ್ತಿ ನೀಡಲಾಗಿದೆ. ಇದು ಬಿಜೆಪಿ ಪ್ರಶಸ್ತಿಯೇ ಹೊರತು ರಾಷ್ಟ್ರಪ್ರಶಸ್ತಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೊಂದು ಪ್ರಹಸನ. ಎಲ್ಲ ಕಲಾತ್ಮಕ ಚಿತ್ರಗಳನ್ನು ನಿರ್ಲಕ್ಷಿಸಲಾಗಿದೆ. ರಾಷ್ಟ್ರಪ್ರಶಸ್ತಿ ಇರುವುದು ವಾಸ್ತವವಾಗಿ ಪ್ರಾದೇಶಿಕ ಭಾಷಾ ಚಿತ್ರಗಳಿಗೆ. ಆದರೆ ಎಲ್ಲ ಪ್ರಶಸ್ತಿಗಳು ಬಾಲಿವುಡ್ ಪಾಲಾಗಿವೆ. ಬಾಹುಬಲಿ, ದ ಬಿಗಿನಿಂಗ್, ತನ್ ವೆಡ್ಸ್ ಮನು ರಿಟರ್ನ್ಸ್, ಪೀಕು, ಬಜರಂಗಿ ಭಾಯ್‌ಜಾನ್ ಹಾಗೂ ಬಾಜಿರಾವ್ ಮಸ್ತಾನಿ ಚಿತ್ರಗಳಷ್ಟೇ ಪ್ರಶಸ್ತಿ ಬಾಚಿಕೊಂಡಿವೆ ಎಂದು ಹೇಳಿದ್ದಾರೆ.





