ಸಂಪೂರ್ಣ ಸುರಕ್ಷಾ ಯೋಜನೆ 7 ಜಿಲ್ಲೆಗಳಿಗೆ ವಿಸ್ತರಣೆ: ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ, ಮಾ.29: ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರ ಸದಸ್ಯರು ಮತ್ತು ಕ್ಷೇತ್ರದ ಸಿಬ್ಬಂದಿಗೆ ಮಾತ್ರ ಪ್ರಸ್ತುತ ಇರುವ ಸಂಪೂರ್ಣ ಸುರಕ್ಷಾ ಯೋಜನೆಯನ್ನು ಮುಂದಿನ ವರ್ಷ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಇದರಿಂದಾಗಿ 3.25 ಲಕ್ಷ ಕುಟುಂಬಗಳ 11.95 ಸದಸ್ಯರಿಗೆ ವಿಮಾ ಸೌಲಭ್ಯ ದೊರಕಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ನಾಲ್ಕು ವಿಮಾ ಕಂಪೆನಿಗಳಿಗೆ ಮುಂದಿನ ವರ್ಷದ ವಿಮಾ ಸೌಲಭ್ಯ ನೀಡುವುದಕ್ಕಾಗಿ ಧರ್ಮಸ್ಥಳದ ತಮ್ಮ ನಿವಾಸದಲ್ಲಿ ಮಂಗಳವಾರ 45.40 ಕೋಟಿ ರೂ. ಪ್ರೀಮಿಯಂ ಹಸ್ತಾಂತರಿಸಿ ಮಾತನಾಡಿದ ಅವರು, ಸದಸ್ಯರಾದವರಿಗೆ ರಿಯಾಯಿತಿ ದದಲ್ಲಿ ನಗದು ರಹಿತ ಚಿಕಿತ್ಸೆ ನೀಡುವುದಕ್ಕಾಗಿ ಈಗಾಗಲೇ 150 ಅಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಸಂಪೂರ್ಣ ಸುರಕ್ಷೆ ಜಾರಿಗೊಳಿಸಿದ ನಂತರ ಯೋಜನೆಯ ಫಲಾನುಭವಿಗಳಿಗೆ ವಿಮೆಯ ಮಹತ್ವ ತಿಳಿಯಿತು. ಹಿಂದೆ ಅನಾರೋಗ್ಯ ಉಂಟಾದಾಗ ಆಸ್ಪತ್ರೆಯ ಚಿಕಿತ್ಸೆ ಭರಿಸಲಾಗದೆ ದಿನಕಳೆಯುತ್ತಾ ರೋಗ ಉಲ್ಬಣಗೊಂಡ ನಂತರ ಚಿಕಿತ್ಸೆಗೆ ಹೋಗುತ್ತಿದ್ದರು. ಇದರಿಂದ ದುಬಾರಿ ವೆಚ್ಚವನ್ನು ಸಾಲ ಮಾಡಿ ಭರಿಸುವ ಪರಿಸ್ಥಿತಿ ಅವರದಾಗಿತ್ತು. ಆದರೆ ಈಗ ವಿಮೆಯ ಮಹತ್ವ ತಿಳಿದು ರೋಗ ಬರುವ ಮುನ್ನವೇ ಆರೋಗ್ಯ ತಪಾಸಣೆ ಮಾಡುವ ಧೈರ್ಯ ಬಂದಿದೆ. ರೋಗದ ಲಕ್ಷಣಗಳು ಕಂಡು ಬಂದಾಗ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ ಎಂದರು. ಧ.ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳ ಆರೋಗ್ಯ ಸಮಸ್ಯೆಯಿಂದಾಗುವ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಹೆಗ್ಗಡೆಯವರು 2004ರಲ್ಲಿ ಆರಂಭಿಸಿದ ಸಂಪೂರ್ಣ ಸುರಕ್ಷಾ ಯೋಜನೆಯಡಿ 12 ವರ್ಷಗಳಲ್ಲಿ 7.75ಕ್ಷ ಜನರಿಗೆ 332 ಕೋಟಿ ರೂ. ವೌಲ್ಯದ ವಿವಿಧ ಸೌಲಭ್ಯಗಳನ್ನು ನೀಡಲಾಗಿದೆ. ಅಲ್ಲದೆ ಫಲಾನುಭವಿಗಳಿಗೆ ಮರಣ ಸಾಂತ್ವನ ಯೋಜನೆಯಂತೆ 5,000 ರೂ. ನೀಡಲಾಗುತ್ತಿದೆ. ಅದರಂತೆ 3 ಕೋಟಿ ರೂ. ವ್ಯಯಿಸಲಾಗಿದೆ. ಸಂಪೂರ್ಣ ಸುರಕ್ಷಾ ಯೋಜನೆ ಫಲಾನುಭವಿಗಳಿಗೆ ತಲುಪಿಸಲು ಸಿಬ್ಬಂದಿ ಇತರ ವೆಚ್ಚವೆಂಬಂತೆ ಕ್ಷೇತ್ರದ ವತಿಯಿಂದ ಸುಮಾರು 4 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದರು. ಹೇಮಾವತಿ ವಿ. ಹೆಗ್ಗಡೆ, ನ್ಯಾಷನಲ್ ಇನ್ಸುರೆನ್ಸ್ ಕಂಪೆನಿಯ ಪಿ.ವಿ. ಶರಣ್, ಡಾ. ಸುಬ್ಬರಾವ್, ಯುನೈಟೆಡ್ ಇಂಡಿಯಾ ಕಂಪೆನಿಯ ಅಶೋಕ್ ಕುಮಾರ್, ಅಮರ್ ಸಿಂಹ, ನ್ಯೂ ಇಂಡಿಯಾ ಇನ್ಶುರೆನ್ಸ್ ಕಂಪೆನಿಯ ಶೋಭಾ, ಮಿರ್ಜಾ ಕಪೂರ್, ಓರಿಯೆಂಟಲ್ ಇನ್ಸುರೆನ್ಸ್ ಕಂಪನಿಯ ಸುರೇಶ್ ಬಲರಾಮ್, ಸುರಕ್ಷಾ ವಿಭಾಗದ ನಿರ್ದೇಶಕ ಅಬ್ರಹಾಂ,ಎಚ್‌ಆರ್‌ಡಿ ವಿಭಾಗದ ಚಂದ್ರಶೇಖರ್, ಸುರಕ್ಷಾ ವಿಭಾಗದ ಯೋಜನಾಧಿಕಾರಿಗಳಾದ ಶಿವಪ್ರಸಾದ್, ಪದ್ಮಯ್ಯ ಉಪಸ್ಥಿತರಿದ್ದರು.







