ಕಟ್ಟಡ ತ್ಯಾಜ್ಯ ನಿರ್ವಹಣೆಗೆ ಕೇಂದ್ರದ ಹೊಸ ಕಾನೂನು

ಬೃಹತ್ ಬಿಲ್ಡರ್‌ಗಳು ಹಾಗೂ ತ್ಯಾಜ್ಯ ಉತ್ಪಾದಕರು ತಮ್ಮ ಕಟ್ಟಡ ನಿರ್ಮಾಣ ಯೋಜನೆಯ ಜೊತೆಗೆ ತ್ಯಾಜ್ಯ ನಿರ್ವಹಣಾ ಯೋಜನೆಯ ವಿವರಗಳನ್ನು ಕೂಡಾ ಇನ್ನು ಮುಂದೆ ಸಲ್ಲಿಸುವುದನ್ನು ನೂತನ ನಿಯಮಗಳು ಕಡ್ಡಾಯಗೊಳಿಸಿವೆ. ಒಂದು ವೇಳೆ ಈ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಸಲ್ಲಿಸದಿದ್ದರೆ ಅವರಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮತಿಯನ್ನು ನೀಡಲಾಗುವುದಿಲ್ಲ.
ಹೊಸದಿಲ್ಲಿ, ಮಾ.29: ಕಟ್ಟಡಗಳ ನಿರ್ಮಾಣ ಹಾಗೂ ಧ್ವಂಸ ಕಾರ್ಯಾಚರಣೆಯಿಂದ ಉತ್ಪತ್ತಿ ಯಾಗುವ ತ್ಯಾಜ್ಯಗಳನ್ನು ರಸ್ತೆಬದಿ ಅಥವಾ ಚರಂಡಿಗಳಲ್ಲಿ ಎಸೆಯುವುದನ್ನು ನಿಷೇಧಿಸಲು, ಕೇಂದ್ರ ಸರಕಾರವು ಮಂಗಳವಾರ ನೂತನ ನಿಯಮಾವಳಿಗಳನ್ನು ಪ್ರಕಟಿಸಿದೆ. ರಾಜಧಾನಿ ದಿಲ್ಲಿ ಸೇರಿದಂತೆ ಬೃಹತ್ ನಗರಗಳಲ್ಲಿ ಶೇ.20ರಷ್ಟು ಪರಿಸರ ಮಾಲಿನ್ಯಕ್ಕೆ ಕಾರಣವಾಗುವಂತಹ ಧೂಳನ್ನು ಕಡಿಮೆಗೊಳಿಸುವುದೇ ಈ ನಿಯಮಾವಳಿಗಳ ಮುಖ್ಯ ಉದ್ದೇಶವಾಗಿದೆ.
ಕೇಂದ್ರ ಪರಿಸರ ಸಚಿವಾಲಯವು ರೂಪಿಸಿರುವ ‘ಕಟ್ಟಡ ನಿರ್ಮಾಣ ಹಾಗೂ ಧ್ವಂಸ ತ್ಯಾಜ್ಯ ನಿರ್ವಹಣೆ ನಿಯಮಗಳು 2016’ ಪ್ರಕಾರ 10 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿರುವ ನಗರಗಳಲ್ಲಿ 18 ತಿಂಗಳುಗಳೊಳಗೆ ಹಾಗೂ 5ರಿಂದ 10 ಲಕ್ಷದೊಳಗೆ ಜನಸಂಖ್ಯೆಯಿರುವ ನಗರಗಳಲ್ಲಿ ಎರಡು ವರ್ಷಗಳೊಳಗೆ ಮತ್ತು 5 ಲಕ್ಷಕ್ಕೂ ಕಡಿಮೆ ಜನಸಂಖ್ಯೆಯಿರುವ ನಗರಗಳಲ್ಲಿ ಮೂರು ವರ್ಷಗಳೊಳಗೆ ಸ್ಥಳೀಯಾಡಳಿತಗಳು ತ್ಯಾಜ್ಯ ನಿರ್ವಹಣಾ ಸ್ಥಾವರಗಳನ್ನು ನಿರ್ಮಿಸುವುದು ಕಡ್ಡಾಯವಾಗಿದೆ.
ಬೃಹತ್ ಬಿಲ್ಡರ್‌ಗಳು ಹಾಗೂ ತ್ಯಾಜ್ಯ ಉತ್ಪಾದಕರು ತಮ್ಮ ಕಟ್ಟಡ ನಿರ್ಮಾಣ ಯೋಜನೆಯ ಜೊತೆಗೆ ತ್ಯಾಜ್ಯ ನಿರ್ವಹಣಾ ಯೋಜನೆಯ ವಿವರಗಳನ್ನು ಕೂಡಾ ಇನ್ನು ಮುಂದೆ ಸಲ್ಲಿಸುವುದನ್ನು ನೂತನ ನಿಯಮಗಳು ಕಡ್ಡಾಯಗೊಳಿಸಿವೆ. ಒಂದು ವೇಳೆ ಈ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಸಲ್ಲಿಸದಿದ್ದರೆ ಅವರಿಗೆ ನೂತನ ನಿರ್ಮಾಣಕ್ಕೆ ಅನುಮತಿಯನ್ನು ನೀಡಲಾಗುವುದಿಲ್ಲ.
‘‘ದೇಶದಲ್ಲೇ ಪ್ರಪ್ರಥಮ ಬಾರಿಗೆ ಕೇಂದ್ರ ಸರಕಾರವು ಕಟ್ಟಡ ನಿರ್ಮಾಣ ಹಾಗೂ ಧ್ವಂಸ ತ್ಯಾಜ್ಯ ನಿಯಮಗಳನ್ನು ರೂಪಿಸಿದೆ. ಮಾಲಿನ್ಯದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಉದ್ದೇಶದಿಂದ ಈ ಉಪಕ್ರಮ ಕೈಗೊಳ್ಳಲಾಗಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಅಂದಾಜಿನ ಪ್ರಕಾರ ದೇಶದಲ್ಲಿ ವಾರ್ಷಿಕವಾಗಿ 530 ದಶಲಕ್ಷ ಟನ್‌ಗಳಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತದೆ. ಯಾವುದೇ ಕಾನೂನಿನ ಕಟ್ಟುರಾಡುಗಳಿಲ್ಲದೆ, ಈ ತ್ಯಾಜ್ಯಗಳನ್ನು ತೆರೆದ ಬಯಲುಗಳು, ನದಿ, ಚರಂಡಿ, ಅರಣ್ಯ ಪ್ರದೇಶಗಳು,ಹೊಂಡಗಳಲ್ಲಿ ಹಾಗೂ ರಸ್ತೆ ಬದಿಗೆ ಎಸೆಯಲಾಗುತ್ತದೆ ಎಂದು ಜಾವಡೇಕರ್ ತಿಳಿಸಿದ್ದಾರೆ.
ತ್ಯಾಜ್ಯ ಉತ್ಪಾದಕರು ಬೃಹತ್ ಪ್ರಮಾಣದ ತ್ಯಾಜ್ಯವನ್ನು ಮುನ್ಸಿಪಲ್ ಅಡಳಿತಗಳು, ಸಂಗ್ರಹಿಸಿ ಸಂಸ್ಕರಣಾ ಘಟಕಳಿಗೆ ಅವನ್ನು ವಿಲೇವಾರಿ ಮಾಡುವುದಕ್ಕೆ ವಿಶೇಷ ಕಟ್ಟಡ ನಿರ್ಮಾಣಕಾರರಿಗೆ ಶುಲ್ಕವನ್ನು ವಿಧಿಸಲಾಗುವುದೆಂದು ಅವರು ತಿಳಿಸಿದ್ದಾರೆ.







