ತೆಲಂಗಾಣ ಶಾಸಕರಿಗೆ ಭರ್ಜರಿ ವೇತನ
ಮಾಸಿಕ ವೇತನದಲ್ಲಿ ಶೇ.163ರಷ್ಟು ಹೆಚ್ಚಳ
ಹೊಸದಿಲ್ಲಿ,ಮಾ.29: ತೆಲಂಗಾಣದ ಶಾಸಕರು ದೇಶದಲ್ಲೇ ಅತ್ಯಧಿಕ ವೇತನ ಪಡೆಯುವ ಶಾಸಕರೆನಿಸಿಕೊಂಡಿದ್ದಾರೆ. ತೆಲಂಗಾಣ ಶಾಸಕರ ಮಾಸಿಕ ವೇತನವನ್ನು 2.5 ಲಕ್ಷಕ್ಕೇರಿಸುವ ವಿಧೇಯಕಕ್ಕೆ ಮಂಗಳವಾರ ವಿಧಾನಸಭೆ ಅನುಮೋದನೆ ನೀಡಿತು. ಇದರೊಂದಿಗೆ ತೆಲಂಗಾಣ ಶಾಸಕರ ಮಾಸಿಕ ವೇತನದಲ್ಲಿ ಶೇ.163ರಷ್ಟು ಏರಿಕೆಯಾದಂತಾಗಿದೆ.
ತೆಲಂಗಾಣ ವಿಧಾನಸಭೆ ಹಾಗೂ ವಿಧಾನಪರಿಷತ್ ಶಾಸಕರ ಮೂಲವೇತನವನ್ನು 12 ಸಾವಿರ ರೂ.ಗಳಿಂದ 20 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಇತರ ಭತ್ತೆಗಳು, ಸೌಲಭ್ಯಗಳು ಹಾಗೂ ಸಬ್ಸಿಡಿಗಳನ್ನು ಒಳಗೊಂಡ ಒಟ್ಟು ಮಾಸಿಕ ವೇತನವನ್ನು 83 ಸಾವಿರ ರೂ.ಗಳಿಂದ 2.3 ಲಕ್ಷ ರೂ.ಗೆ ಏರಿಸಲಾಗಿದೆ.
ಕಳೆದ ವರ್ಷದ ಜೂನ್‌ನಲ್ಲಿ ದಿಲ್ಲಿ ವಿಧಾನಸಭೆಯ ಶಾಸಕರ ಮಾಸಿಕ ವೇತನವನ್ನು 2.1 ಲಕ್ಷ ರೂ.ಗೆ ಹೆಚ್ಚಿಸಿತ್ತು. ಇದೀಗ ತೆಲಂಗಾಣ, ಶಾಸಕರಿಗೆ ವೇತನ ಹೆಚ್ಚಳದಲ್ಲಿ ದಿಲ್ಲಿಯನ್ನು ಎರಡನೆ ಸ್ಥಾನಕ್ಕೆ ತಳ್ಳಿದೆ.
ಹೆಚ್ಚುತ್ತಿರುವ ಸಾಲದ ಹೊರೆ ಹಾಗೂ ಹದಗೆಟ್ಟಿರುವ ರೈತರ ಸಮಸ್ಯೆಯಿಂದ ಬಾಧಿತವಾಗಿರುವ ತೆಲಂಗಾಣದಲ್ಲಿ ಶಾಸಕರ ವೇತನದಲ್ಲಿ ಭಾರೀ ಏರಿಕೆ ಮಾಡಿರುವುದು ವ್ಯಾಪಕ ಖಂಡನೆಗೆ ಕಾರಣವಾಗಿದೆ.





