ಹರ್ಯಾಣ: ಜಾಟರಿಗೆ ಮೀಸಲಾತಿ ಜಾರಿ

ಚಂಡಿಗಢ, ಮಾ.29: ಸರಕಾರಿ ಉದ್ಯೋಗಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಜಾಟ್ ಹಾಗೂ ಇತರ ಐದು ಸಮುದಾಯಗಳಿಗೆ ಮೀಸಲಾತಿಯನ್ನು ನೀಡುವ ವಿಧೇಯಕವನ್ನು ಹರ್ಯಾಣ ವಿಧಾನಸಭೆ ಮಂಗಳವಾರ ಅವಿರೋಧವಾಗಿ ಅಂಗೀಕರಿಸಿತು.
ತಮ್ಮ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ಕಳೆದ ತಿಂಗಳು ಹಿಂಸಾತ್ಮಕ ಚಳವಳಿಯನ್ನು ಆರಂಭಿಸಿದ್ದ ಜಾಟರು , ತಮ್ಮ ಬೇಡಿಕೆಗಳ ಈಡೇರಿಕೆಗೆ ಸರಕಾರಕ್ಕೆ ಎಪ್ರಿಲ್ ಮೂರರ ಅಂತಿಮ ಗಡುವನ್ನು ವಿಧಿಸಿದ್ದರು. ಹರ್ಯಾಣ ಹಿಂದುಳಿದ ವರ್ಗಗಳು (ಶಿಕ್ಷಣ ಸಂಸ್ಥೆಗಳಲ್ಲಿ ಸೇವೆಗಳು ಹಾಗೂ ಪ್ರವೇಶಾತಿಯಲ್ಲಿ ಮೀಸಲಾತಿ) ವಿಧೇಯಕ, 2016 ಹಾಗೂ ಹರ್ಯಾಣ ಹಿಂದುಳಿದ ವರ್ಗಗಳ ಆಯೋಗ ವಿಧೇಯಕ 2016 ಎಂಬ ಎರಡು ವಿಧೇಯಕಗಳನ್ನು ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ವಿಧಾನಸಭೆಯಲ್ಲಿ ಮಂಡಿಸಿದರು.
ಹಿಂದುಳಿದ ವರ್ಗಗಳ ಶ್ರೇಣಿಯಲ್ಲಿ ನೂತನ ‘ಸಿ’ ಪ್ರವರ್ಗವನ್ನು ಸೃಷ್ಟಿಸುವ ಮೂಲಕ ಪ್ರಸ್ತಾಪಿತ ವಿಧೇಯಕವು ಜಾಟರು ಹಾಗೂ ಇತರ ಐದು ಜಾತಿಗಳಾದ ಸಿಖ್ಖ್ ಜಾಟರು, ರೊರ್ಸ್, ಬಿಷ್ಣೋಯಿಗಳು,ತ್ಯಾಗಿಗಳು ಹಾಗೂ ಮುಲ್ಲಾ ಜಾಟ್/ಮುಸ್ಲಿಮ್ ಜಾಟರಿಗೆ ಮೀಸಲಾತಿಗೆ ಅವಕಾಶ ಮಾಡಿಕೊಡಲಿದೆ. ಸರಕಾರಿ ಹಾಗೂ ಸರಕಾರಿ ಅನುದಾನದ ಶಿಕ್ಷಣಸಂಸ್ಥೆಗಳಲ್ಲಿ ಹಾಗೂ III ಹಾಗೂ IV ದರ್ಜೆಯ ಸರಕಾರಿ ಉದ್ಯೋಗಗಳಲ್ಲಿ ಜಾಟ್ ಹಾಗೂ ಇತರ ಐದು ಜಾತಿಗಳಿಗೆ ಶೇ.10ರಷ್ಟು ಮೀಸಲಾತಿಯನ್ನು ಅದು ಒದಗಿಸಲಿದೆ. ಒಂದು ಹಾಗೂ ಎರಡನೆ ದರ್ಜೆಯ ಸರಕಾರಿ ಉದ್ಯೋಗಗಳಲ್ಲೂ ಅದು ಈ ಸಮುದಾಯಗಳಿಗೆ ಶೇ.6ರಷ್ಟು ಮೀಸಲಾತಿಯನ್ನು ನೀಡಲಿದೆ.
ಜಾಟರಿಗೆ ಮೀಸಲಾತಿ ನೀಡುವುದಕ್ಕೆ ಒಲವು ವ್ಯಕ್ತಪಡಿಸಿದ್ದ ಕಾಂಗ್ರೆಸ್, ಇಂದಿನ ವಿಧಾನಸಭಾ ಕಲಾಪದಲ್ಲಿ ಭಾಗವಹಿಸಿರಲಿಲ್ಲ.
ರಾಜ್ಯಪಾಲರ ಭಾಷಣದ ಪ್ರತಿಗಳನ್ನು ಹರಿದುಹಾಕಿದುದಕ್ಕಾಗಿ ಮೂವರು ಕಾಂಗ್ರೆಸ್ ಶಾಸಕರನ್ನು ಆರು ತಿಂಗಳುಗಳ ಕಾಲ ಸದನದಿಂದ ಅಮಾನತುಗೊಳಿಸಿರುವುದನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಅವರು ಕಲಾಪಗಳನ್ನು ಬಹಿಷ್ಕರಿಸಿದ್ದರು. ಹರ್ಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 15 ಶಾಸಕರನ್ನು ಹೊಂದಿದೆ.







