ಆರೆಸ್ಸೆಸ್ ಮುಖ್ಯಸ್ಥ ಭಾಗ್ವತ್ ಈ ಮಸೀದಿಗೇ ಯಾಕೆ ಭೇಟಿ ನೀಡಲಿದ್ದಾರೆ ?

ಲಕ್ನೋ , ಮಾ. 30: ಆರೆಸ್ಸೆಸ್ ಮುಖ್ಯಸ್ಥರು ಯಾವುದೇ ನಗರಕ್ಕೆ ಭೇಟಿ ನೀಡಿದಾಗ ಅಲ್ಲಿನ ಪ್ರಸಿದ್ಧ ದೇವಾಲಯಕ್ಕೆ ಹೋಗುವುದು ಸಾಮಾನ್ಯವಿರಬಹುದು. ಆದರೆ ಈ ಬಾರಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಒಂದು ಮಸೀದಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಇದು ವಿಶೇಷ. ಅಖಿಲ ಭಾರತ ಮುಸ್ಲಿಂ ಮಹಿಳೆಯರ ವೈಯಕ್ತಿಕ ಕಾನೂನು ಮಂಡಳಿ ಎಂಬ ಸಂಸ್ಥೆಯ ಅಧ್ಯಕ್ಷೆ, ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವ ಶಾಯಿಸ್ತ ಅಂಬರ್ ಎಂಬ ಮಹಿಳೆಯ ಆಹ್ವಾನದ ಮೇರೆಗೆ ಆಕೆಯೇ ನಿರ್ಮಿಸಿರುವ ಮಸೀದಿಗೆ ಭೇಟಿ ನೀಡುವುದಾಗಿ ಭಾಗ್ವತ್ ಭರವಸೆ ನೀಡಿದ್ದಾರೆ.
ಲಕ್ನೋದ ಮಾಧೊ ಆಶ್ರಮ್ ಕಾರ್ಯಕ್ರಮಕ್ಕೆ ಬಂದಿದ್ದ ಭಾಗ್ವತ್ ಅವರನ್ನು ಶಾಯಿಸ್ತ ಭೇಟಿಯಾಗಿ ಆಶ್ರಮದ ಸಮೀಪವೇ ತಾವು ನಿರ್ಮಿಸಿದ ಮಸೀದಿಗೆ ಭೇಟಿ ನೀಡಲು ಆಹ್ವಾನ ನೀಡಿದ್ದಕ್ಕೆ " ಅವರು ಒಪ್ಪಿ, ಮುಂದಿನ ಲಕ್ನೋ ಭೇಟಿ ಸಂದರ್ಭ ಬರುತ್ತೇನೆ " ಎಂದು ಹೇಳಿದ್ದಾರೆ ಎಂದು ಶಾಯಿಸ್ತ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಶಾಯಿಸ್ತ ಪ್ರಕಾರ " ಭಾಗ್ವತ್ ಮಸೀದಿಗೆ ಭೇಟಿ ನೀಡಿದ ಕೂಡಲೇ ಆರೆಸ್ಸೆಸ್ ವಿರುದ್ಧ ಮಾಡಲಾಗುತ್ತಿರುವ ಹಿಂದುತ್ವ ಪ್ರಚಾರ ಹಾಗು ಮುಸ್ಲಿಂ ದ್ವೇಷದ ಆರೋಪಗಳಿಗೆ ತೆರೆ ಬೀಳಲಿದೆ. ಭಾಗ್ವತ್ ಅವರು ಮಾಡಿದ ಭಾಷಣದಲ್ಲಿ ಅವರು ಕೇವಲ ದೇಶ ನಿರ್ಮಾಣದ ಮಾತಾಡಿದರೆ ವಿನಃ ಬೇರೆ ವಿಷಯ ಹೇಳಲಿಲ್ಲ. ಅದರಲ್ಲಿ ಮುಸ್ಲಿಮರಿಗೆ ಸಮಸ್ಯೆ ಆಗುವಂತಹ ಯಾವುದೇ ವಿಷಯಗಳಿಲ್ಲ. ಅವರು ಮುಂದಿನ ಬಾರಿ ಬಂದಾಗ ಖಂಡಿತ ಮಸೀದಿಗೆ ಭೇಟಿ ನೀಡಲಿದ್ದಾರೆ " .
ಸ್ಥಳೀಯ ಆರೆಸ್ಸೆಸ್ ಮುಖಂಡರೊಂದಿಗೆ ತನ್ನ ಸಂಬಂಧದ ಕುರಿತು ಮಾತನಾಡಿದ ಶಾಯಿಸ್ತ " ನಾನು ಕಳೆದ ಎರಡು ದಶಕಗಳಿಂದ ಮಾಧವ್ ಆಶ್ರಮ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. 1990 ವಾಜಪೇಯಿ , ಅದ್ವಾನಿ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಆಶ್ರಮದ ಶಿಲಾನ್ಯಾಸ ನಡೆದಾಗ ಸ್ಥಳೀಯ ಆರೆಸ್ಸೆಸ್ ಮುಖಂಡರು ನನ್ನನ್ನು ಆಹ್ವಾನಿಸಿದ್ದರು " ಎಂದು ಹೇಳಿದ್ದಾರೆ.







