ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ: ಕೌಶಲ್ಯ ಅಭಿವೃದ್ಧಿಗೆ 500 ಕೋಟಿ ರೂ. ವೆಚ್ಚ -ಸಿದ್ದರಾಮಯ್ಯ

ಬೆಂಗಳೂರು.ಮಾ.30:ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಕೌಶಲ್ಯ ಅಭಿವೃದ್ಧಿಗೆ 500 ಕೋಟಿ ರೂಪಾಯಿ ಹಣ ವೆಚ್ಚ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಪ್ರಕಟಿಸಿದರು.
ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಇದೇ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯನ್ನು ಸೃಜನೆಮಾಡಲಾಗುವುದು. ವಿವಿಧ ಇಲಾಖೆಗಳಲ್ಲಿರುವ ತರಬೇತಿ ಕಾರ್ಯಕ್ರಮಗಳನ್ನು ಹಾಗೂ ತರಬೇತಿಗೆ ಮೀಸಲಾದ ಹಣವನ್ನು ಒಂದೇ ವೇದಿಕೆಗೆ ತರಲಾಗುವುದು. ಇದರ ಉಸ್ತುವಾರಿಯನ್ನು ಸ್ವತಃ ತಾವೇ ವಹಿಸಿಕೊಳ್ಳಲಿದ್ದು, ಯುವರಿಗೆ ಉದ್ಯೋಗ ದೊರಕಿಸಿಕೊಡಲು ವಿಶೇಷ ಗಮನಹರಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿತ ವಾತಾವರಣವಿದ್ದು, ಬರುವ ದಿನಗಳಲ್ಲಿ ಕುಶಲಕರ್ಮಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ. ಕಳೆದ ತಿಂಗಳು ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದ್ದು, ರಾಜ್ಯದಲ್ಲಿ ಹೂಡಿಕೆ ಸ್ನೇಹಿ ವಾತಾವರಣವಿದೆ. ಇದನ್ನು ಮನಗಂಡು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಮೂಲ ಸೌಕರ್ಯಕ್ಕೂ ಸಹ ಒತ್ತು ನೀಡುತ್ತಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ವಾತಾವರಣ ಸೃಷ್ಟಿಸಲಾಗುತ್ತಿದೆ. ರಾಜ್ಯ ಬಜೆಟ್ ಸಾಮಾಜಿಕ ನ್ಯಾಯಕ್ಕೆ ಭದ್ರ ಬುನಾದಿ ಹಾಕಿದೆ. ಇದರ ತಳಹದಿಯ ಮೇಲೆ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ರಾಜ್ಯದ ಆಯವ್ಯಯ ಅಭಿವೃದ್ಧಿಗೆ ಪೂರಕವಾಗಿವೆ. ಆದರೆ ಪ್ರತಿಪಕ್ಷಗಳು ಬಜೆಟ್ ಬಗ್ಗೆ ಮಾಡಿರುವ ಟೀಕೆ ಆಧಾರರಹಿತ ಎಂದು ಹೇಳಿದರು.
ರಾಜ್ಯ ಸರ್ಕಾರ ಉತ್ತಮ ದಿಕ್ಕಿನತ್ತ ಸಾಗುತ್ತಿದೆ. ಕೇಂದ್ರ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಮೈಸೂರು ನಗರ ಸತತ ಎರಡನೇ ಬಾರಿಗೆ ಸ್ವಚ್ಛ ನಗರಿ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಇವೆಲ್ಲವೂ ಸರ್ಕಾರದ ಅಭಿವೃದ್ಧಿಗೆ ದೊರತ ಗೌರವವಾಗಿದೆ ಎಂದರು.
ಒಂದೆಡೆ ಉದ್ಯೋಗ ಸೃಷ್ಠಿಗೆ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಒತ್ತು, ಮತ್ತೊಂದೆಡೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಪುಷ್ಠಿ ನೀಡಿರುವ 2016-17 ನೇ ಸಾಲಿನ ರಾಜ್ಯ ಬಜೆಟ್ ಬೆಳವಣಿಗೆಗೆ ಪೂರಕ ಹಾಗೂ ದೂರದೃಷ್ಠಿಗೆ ಧ್ಯೋತಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ವಿಧಾನ ಸಭೆಯಲ್ಲಿ ಬಣ್ಣಿಸಿದರು.
ರಾಜ್ಯದ ಬಜೆಟ್ ಮೇಲಿನ ವಿಸ್ತತ ಚರ್ಚೆಗೆ ಬುಧವಾರ ಉತ್ತರಿಸಿ ಮಾತನಾಡುತ್ತಿದ್ದ ಅವರು ರಾಜ್ಯದ ಬಜೆಟ್ ಗಾತ್ರವು 2015-16 ನೇ ಸಾಲಿನಲ್ಲಿ 1,42,534 ಕೋಟಿ ರೂ. ಆಗಿತ್ತು, 2016-17 ನೇ ಸಾಲಿನಲ್ಲಿ 1,63,419 ಕೋಟಿ ರೂ. ಆಗಿದೆ.ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಆಯವ್ಯಯದ ಗಾತ್ರದಲ್ಲಿ ಶೇಕಡಾ 14.65 ರಷ್ಟು ಹೆಚ್ಚಳವಾಗಿದೆ. ಕಳೆದ ಬಾರಿಯ ರಾಜ್ಯ ಬಜೆಟ್‌ನ ಯೋಜನಾ ಗಾತ್ರವು 72,597 ಕೋಟಿ ರೂ. ಆಗಿತ್ತು. ಇದು ಈ ಬಜೆಟ್‌ನಲ್ಲಿ 85,375 ಕೋಟಿ ರೂ. ಆಗಿದೆ. ರಾಜ್ಯದ ಯೋಜನಾ ಗಾತ್ರದಲ್ಲಿ 12,778 ಕೋಟಿ ರೂ. ಜಿಗಿತವನ್ನು ಕಾಣಬಹುದಾಗಿದೆ.ಅಲ್ಲದೆ, ಕಳೆದ ಆಯವ್ಯಯಕ್ಕೆ ಹೋಲಿಸಿದಲ್ಲಿ ರಾಜ್ಯ ಯೋಜನಾ ಗಾತ್ರದಲ್ಲಿ ಶೇಕಡಾ 17.6 ಹೆಚ್ಚಳ ಉಂಟಾಗಿದೆ. ಗುಜರಾತ್, ತಮಿಳು ನಾಡು, ಆಂಧ್ರ ಪ್ರದೇಶ, ಕೇರಳ ಹಾಗೂ ರಾಜಾಸ್ಥಾನ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಆಂತರಿಕ ದೇಶೀಯ ಉತ್ಪನ್ನದ ಪ್ರಮಾಣದಲ್ಲಿ ಹಾಗೂ ಆರ್ಥಿಕ ನಿರ್ವಹಣೆಯಲ್ಲಿ ನಮ್ಮ ಕರ್ನಾಟಕದ ಸಾಧನೆ ಅತ್ಯುತ್ತಮವಾಗಿದೆ. ಅಂತೆಯೇ, ವಿತ್ತೀಯ ಹೊಣೆಗಾರಿಕೆ ಕಾಯಿದೆ-2002ರ ಮಾನದಂಡಗಳಂತೆ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಡುವಲ್ಲಿಯೂ ರಾಜ್ಯ ಸರ್ಕಾರವು ಯಶಸ್ವಿಯಾಗಿದೆ ಎಂದರು.
ಅರಣ್ಯ, ಆಹಾರ ಹಾಗೂ ಇಂಧನ ಇಲಾಖೆಗಳನ್ನು ಹೊರತುಪಡಿಸಿ ಬೇರಾವ ಇಲಾಖೆಯ ಅನುದಾನವೂ ಕಡಿತವಾಗಿಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ ಅವರು ಬಡವರು ಹಾಗೂ ಕೆಳ ಮಧ್ಯಮ ವರ್ಗದವರಿಗೆ ತೆರಿಗೆಯ ಹೊರೆ ಹೊರಿಸದ ದೂರದೃಷ್ಠಿಯ ಈ ಆಯವ್ಯಯವು ಪ್ರಗತಿಗೆ ಪೂರಕವಾಗಿದೆ ಎಂದು ತಿಳಿಸಿದರು.







