ಉಪ್ಪಿನಂಗಡಿ : ಹುಚ್ಚು ನಾಯಿ ಕಡಿತಕ್ಕೆ ಎರಡು ದನಗಳು ರಾಬೀಸ್ ರೋಗಕ್ಕೆ ಬಲಿ, ನಾಲ್ವರು ಗಾಯ
ಉಪ್ಪಿನಂಗಡಿ : ಇಲ್ಲಿಗೆ ಸಮೀಪದ 34 ನೇ ನೆಕ್ಕಿಲಾಡಿ ಗ್ರಾಮದ ಕೊಳಕ್ಕೆ ಎಂಬಲ್ಲಿ ಹುಚ್ಚು ನಾಯಿ ಕಡಿತಕ್ಕೆ ನಾಲ್ವರು ಗಾಯಗೊಂಡಿದ್ದು, ನಾಲ್ಕು ದಿನಗಳ ಹಿಂದೆ ಗ್ರಾಮದಲ್ಲಿ ಎರಡು ದನಗಳು ರಾಬೀಸ್ ರೋಗಕ್ಕೆ ಬಲಿಯಾಗುವುದರೊಂದಿಗೆ ಹುಚ್ಚು ನಾಯಿ ಕಾಟಕ್ಕೆ ಗ್ರಾಮದ ಜನತೆ ಕಂಗಾಲಾಗಿದ್ದಾರೆ. ಬುಧವಾರದಂದು ಕೊಳಕ್ಕೆ ಪರಿಸರದಲ್ಲಿ ಹುಚ್ಚಾಟ ಮೆರೆದ ನಾಯಿ ಸೌಮ್ಯ, ಭಾನು, ಸುರೇಶ್, ಮಾಚಿ ಎಂಬವರಿಗೆ ಕಡಿದು ಗಾಯಗೊಳಿಸಿದೆ. ಪರಿಸರದ ರಾಜೀವಿ ಪೂಜಾರಿ ಎಂಬವರ ಒಡೆತನದ ಎರಡು ದನಗಳು ಈ ಹಿಂದೆಯೇ ಹುಚ್ಚು ನಾಯಿ ಕಡಿತಕ್ಕೆ ಸಿಲುಕಿದ ಕಾರಣ ಕಳೆದ ನಾಲ್ಕು ದಿನಗಳ ಹಿಂದೆ ರಾಬೀಸ್ ರೋಗ ಲಕ್ಷಣ ಕಾಣಿಸಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಗ್ರಾಮದಲ್ಲಿ ಹುಚ್ಚು ನಾಯಿ ಹಾವಳಿ ಕಳೆದ ಕೆಲ ಸಮಯಗಳಿಂದ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದರಿಂದ , ಇದೀಗ ಪ್ರಾಣಿಗಳು ರಾಬೀಸ್ ರೋಗಕ್ಕೆ ಬಲಿ ಬಿದ್ದಿರುವುದರಿಂದ ಬೀದಿ ನಾಯಿಗಳ ನಿರ್ಮೂಲನೆ ತನ್ಮೂಲಕ ಹುಚ್ಚು ನಾಯಿಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನೆಕ್ಕಿಲಾಡಿ ಗ್ರಾಮಸ್ಥರು ಪಂಚಾಯತ್ ಆಡಳಿತವನ್ನು ಅಗ್ರಹಿಸಿದ್ದಾರೆ.





