ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ದಿಢೀರ್ ದಾಳಿ
ಅಧಿಕಾರಿಗಳನ್ನು ಕಂಡು ನದಿಗೆ ಜಿಗಿದು ಪರಾರಿಯಾದ ಕಾರ್ಮಿಕ

ಬಂಟ್ವಾಳ: ಪಾಣೆಮಂಗಳೂರಿನ ನಿಷೇಧಿತ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ಅಡ್ಡೆಗೆ ಬಂಟ್ವಾಳ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ವಲಸೆ ಕಾರ್ಮಿಕನೊಬ್ಬ ನೇತ್ರಾವತಿ ನದಿಗೆ ಜಿಗಿದು ನೀರಿನಲ್ಲಿ ಈಜಿ ಪರಾರಿಯಾಗುವ ಮೂಲಕ ತಹಶೀಲ್ದಾರ್ ಅವರನ್ನೇ ಪೇಚೆಗೆ ಸಿಲುಕಿಸಿದ ಘಟನೆ ಬುಧವಾರ ಸಂಜೆ ನಡೆದಿದೆ. ಖಚಿತ ವರ್ತಮಾನದ ಮೇರೆಗೆ ತಹಶೀಲ್ದಾರ್ ಪುರಂದರ ಹೆಗಡೆ ಮತ್ತು ಗ್ರಾಮ ಕರಣಿಕರಾದ ಬಸವರಾಜ್, ಸನಾದಿ, ಪ್ರಶಾಂತ್, ತಾಲೂಕು ಕಚೇರಿ ಸಿಬ್ಬಂದಿ ಸದಾಶಿವ, ಚಾಲಕ ವೆಲೆರಿಯನ್ ಡಿಸೋಜ ಅವರ ತಂಡ ಈ ದಾಳಿ ಕಾರ್ಯಾಚರಣೆಯನ್ನು ನಡೆಸಿತ್ತು.
ಅಧಿಕಾರಿಗಳನ್ನು ಕಂಡ ಕಾರ್ಮಿಕ ನದಿಗೆ ಜಿಗಿಯುವ ಮೂಲಕ ಅಧಿಕಾರಿಗಳನ್ನು ಒಂದು ಕ್ಷಣ ಪೇಚೆಗೆ ಸಿಲುಕಿಸಿದ್ದಾನೆ. ಆತ ನದಿಯ ಇನ್ನೊಂದು ದಡ ಸೇರುವವರೆಗೂ ತಹಶೀಲ್ದಾರ್ ಅವರ ತಂಡ ಆತಂಕದಿಂದಲೇ ಆತನನ್ನು ಗಮನಿಸಿ, ದಡ ಸೇರುತ್ತಿದ್ದಂತೆ ನಿಟ್ಟುಸಿರುವ ಬಿಟ್ಟಿತು. ಆತ ಬುಟ್ಟಿಯೊಂದರಲ್ಲಿ ನದಿಯಿಂದ ಮರಳು ತೆಗೆದು ದಡದಲ್ಲಿ ಸಂಗ್ರಹಿಸುತ್ತಿದ್ದ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.





