ಉನ್ನತ ಮಟ್ಟದ ತನಿಖೆಗೆ ಸಿಎಂಗೆ ಮನವಿ
ಗೋಬರ್‌ಗ್ಯಾಸ್ ಗೋಲ್‌ಮಾಲ್
ಶಿವಮೊಗ್ಗ, ಮಾ.30: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗೋಬರ್ ಗ್ಯಾಸ್ ಘಟಕಗಳ ನಿರ್ಮಾಣದಲ್ಲಾಗಿರುವ ಅವ್ಯವಹಾರವನ್ನು ಉನ್ನತ ಮಟ್ಟದ ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿ, ಇತ್ತೀಚೆಗೆ ಕನ್ನಡ ಸೈನ್ಯ ಸಂಘಟನೆಯು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಪತ್ರ ಅರ್ಪಿಸಿದೆ ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಸಿ. ಜಯ ತಿಳಿಸಿದ್ದಾರೆ. ಈ ಕುರಿತಂತೆ ಪಿ.ಸಿ.ಜಯ ಮಾಹಿತಿ ನೀಡಿ, ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ 2010ರಿಂದ 14ರ ಅವಧಿಯಲ್ಲಿ, ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೇಂದ್ರ-ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಗೋಬರ್ ಗ್ಯಾಸ್ ಘಟಕಗಳನ್ನು ನಿರ್ಮಾಣ ಮಾಡಲಾಗಿತ್ತು. ಖಾಸಗಿ ಏಜೆನ್ಸಿಯೊಂದು ಈ ಘಟಕ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿತ್ತು. ಆದರೆ 2188 ಗೋಬರ್‌ಗ್ಯಾಸ್ ಘಟಕ ನಿರ್ಮಾಣ ಮಾಡದೆ ಮಾಡಿರುವುದಾಗಿ ಸುಳ್ಳು ವರದಿ ಸಲ್ಲಿಸಿದ್ದರು. ಹಾಗೆಯೇ ಈ ಹಿಂದಿನ ಅವಧಿಗಳಲ್ಲಿ ನಿರ್ಮಾಣವಾಗಿದ್ದ ಘಟಕಗಳನ್ನು ತಾನೇ ನಿರ್ಮಿಸಿದ್ದಾಗಿ ನಕಲಿ ದಾಖಲೆ ಸೃಷ್ಟಿಸಿದ್ದರು. ಹಲವು ಗ್ರಾಮಗಳಲ್ಲಿ ಫಲಾನುಭವಿಗಳ ಹೆಸರನ್ನೇ ನಕಲಿಯಾಗಿ ಸೃಷ್ಟಿಸಿದ್ದರು. ಸಾಕಷ್ಟು ಅವ್ಯವಹಾರ ನಡೆಸಿದ್ದರು ಎಂದು ಪಿ. ಸಿ. ಜಯ ದೂರಿದ್ದಾರೆ. ಈ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಿಇಒ ರಾಕೇಶ್‌ಕುಮಾರ್‌ರವರು ಜಿಪಂನ ಅಧಿಕಾರಿಯೊಬ್ಬರನ್ನು ಅಮಾನತ್ತುಗೊಳಿಸಿದ್ದಾರೆ. ಹಾಗೆಯೇ ಗೋಲ್‌ಮಾಲ್ ನಡೆಸಿದ ಖಾಸಗಿ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ದುರ್ಬಳಕೆಯಾದ ಹಣ ವಾಪಸ್ ಪಡೆಯಬೇಕು. ಈ ಅವ್ಯವಹಾರವನ್ನು ಉನ್ನತ ಮಟ್ಟದ ತನಿಖೆಗೊಳಪಡಿಸಬೇಕು ಎಂದು ಪಿ.ಸಿ.ಜಯರವರು ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.





