ಕರಪತ್ರ ಹಂಚುತ್ತಿದ್ದ ವಿದ್ಯಾರ್ಥಿಗಳ ಮೇಲೆ ಎಬಿವಿಪಿ, ಆರೆಸ್ಸೆಸ್ ಹಲ್ಲೆ
ಕರಪತ್ರ ಹಂಚುತ್ತಿದ್ದ ವಿದ್ಯಾರ್ಥಿಗಳ ಮೇಲೆ ಎಬಿವಿಪಿ, ಆರೆಸ್ಸೆಸ್ ಹಲ್ಲೆ
ತುಮಕೂರು, ಮಾ.30: ಹೈದರಾಬಾದ್ ವಿವಿಯ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಮತ್ತು ಜೆಎನ್‌ಯುನ ಕನ್ಹಯ್ಯಕುಮಾರ್ ಅವರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸತ್ಯ ಘಟನೆಗಳ ಕುರಿತ ಕರಪತ್ರಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ಹಂಚುತ್ತಿದ್ದ ಎಐಎಸ್‌ಫ್ ವಿದ್ಯಾರ್ಥಿ ಮುಖಂಡರು ಹಾಗೂ ಎಐಟಿಯುಸಿ ಮುಖಂಡರ ಮೇಲೆ ಎಬಿವಿಪಿ, ಆರೆಸ್ಸೆಸ್ ಮತ್ತು ಭಗತ್ ಯುವಸೇನೆ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ.
ಕನ್ನಡ ಮತ್ತು ಇಂಗ್ಲಿಷ್‌ನಲ್ಲಿರುವ ಕರಪತ್ರವನ್ನು 10 ವಿದ್ಯಾರ್ಥಿಗಳನ್ನು ಒಳಗೊಂಡ ಎಐಎಸ್‌ಎಫ್ ಕಾರ್ಯಕರ್ತರು ತಲಾ ಇಬ್ಬರ ಐದು ತಂಡಗಳನ್ನಾಗಿ ಮಾಡಿಕೊಂಡು ತುಮಕೂರು ವಿಶ್ವವಿದ್ಯಾನಿಲಯ, ಸರಕಾರಿ ಜೂನಿಯರ್ ಕಾಲೇಜು, ಜನನಿಬೀಡ ಪ್ರದೇಶಗಳಾದ ಟೌನ್‌ಹಾಲ್, ಬಸ್ ನಿಲ್ದಾಣ ಇನ್ನಿತರ ಕಡೆಗಳಲ್ಲಿ ಹಂಚುವ ಕೆಲಸ ಮಾಡುತ್ತಿದ್ದರು. ಸರಕಾರಿ ಜೂನಿಯರ್ ಕಾಲೇಜು ಬಳಿ ಕರಪತ್ರ ಹಂಚುತ್ತಿದ್ದ ನಾಗೇಂದ್ರ ಮತ್ತು ವಿನೋದ್‌ಕುಮಾರ್ ಎಂಬ ವಿದ್ಯಾರ್ಥಿಗಳ ಮೇಲೆ 50ರಿಂದ 60 ಜನರ ಎಬಿವಿಪಿ, ಆರೆಸ್ಸೆಸ್ ಮತ್ತು ಭಗತ್ ಯುವಸೇನೆ ಕಾರ್ಯಕರ್ತರು ಹಲ್ಲೆ ಮಾಡಿ ಕರಪತ್ರ ಹಂಚಿಕೆ ಮಾಡದಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಗಳು ನಗರದ ಇತರೆಡೆಗಳಲ್ಲಿ ಕರಪತ್ರ ಹಂಚುತ್ತಿದ್ದ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಇದನ್ನು ವಿಚಾರಿಸಲು ಟೌನ್‌ಹಾಲ್ ನಿಂದ ಬಂದ ವಿ.ಚಿನ್ನಪ್ಪ, ಮಂಜುನಾಥ್ ಮತ್ತು ಜ್ಯೋತಿ ಎಂಬ ವಿಧ್ಯಾರ್ಥಿನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಎಬಿವಿಪಿ, ಆರೆಸ್ಸೆಸ್ ಮತ್ತು ಭಗತ್ ಯುವಸೇನೆ ಕಾರ್ಯ ಕರ್ತರು, ರಸ್ತೆ ಎಂಬುದನ್ನು ಲೆಕ್ಕಿಸದೆ ಸಾರ್ವಜನಿಕರ ಎದುರೆ ಜೂನಿಯರ್ ಕಾಲೇಜು ಮೈದಾನದಿಂದ ಗಾಯಿತ್ರಿ ಟಾಕೀಸ್‌ವರೆಗೆ ಕರ ಪತ್ರ ಹಂಚಿದ ಹಂಚಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಲೇ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರ ಠಾಣೆಯ ಪೊಲೀಸರು ಹಲ್ಲೆ ಮಾಡುತ್ತಿದ್ದವರನ್ನು ತಡೆದು ಗಾಯಾಳುಗಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿನ್ನಪ್ಪಅವರಿಗೆ ಮುಖ, ಬಲಭುಜ, ಹೊಟ್ಟೆಗೆ ಪೆಟ್ಟಾಗಿದ್ದರೆ, ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಕಲಿಯುತ್ತಿರುವ ಜ್ಯೋತಿ ಎಂಬ ವಿದ್ಯಾರ್ಥಿನಿಯ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದಿದೆ. ಈ ಸಂಬಂಧ ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತುಮಕೂರು ಇತಿಹಾಸದಲ್ಲಿಯೇ ಇದೆ ಮೊದಲ ಬಾರಿಗೆ ಇಂತಹ ಘಟನೆ ನಡೆದಿದ್ದು, ಮತ್ತೊಂದು ಮಂಗಳೂರು ಆಗುವ ಲಕ್ಷಣಗಳು ಕಂಡು ಬರುತ್ತಿದೆ. ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿರುವ ಡಿವೈಎಫ್‌ಐ, ಎಸ್‌ಎಫ್‌ಐ, ಸಿಐಟಿಯು, ಎಐಟಿಯುಸಿ, ಸಿಪಿಐ, ಸಿಪಿಐ(ಎಂ) ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಮುಖಂಡರು, ಹಲ್ಲೆ ಮಾಡಿದವರನ್ನು ಕೂಡಲೆ ಬಂಧಿಸಬೇಕು. ಗಾಯಾಳುಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದು ತಾತ್ವಿಕ ವಿಚಾರಗಳ ವಿಷಯದಲ್ಲಿ ಹಲ್ಲೆ ಮಾಡುವಂತಹ ನೀಚ ಕೃತ್ಯಕ್ಕೆ ಇಳಿದಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.







