ಚಿಕ್ಕಮಗಳೂರು ನಗರಸಭೆ: 478.55 ಲಕ್ಷ ರೂ. ಉಳಿತಾಯ ಬಜೆಟ್

ಚಿಕ್ಕಮಗಳೂರು, ಮಾ.30: ಚಿಕ್ಕಮಗಳೂರು ನಗರಸಭೆಯು 2016-17ನೆ ಸಾಲಿನ ಬಜೆಟ್‌ನಲ್ಲಿ 478.55ಲಕ್ಷ ರೂ. ಉಳಿತಾಯ ಬಜೆಟ್‌ನ್ನು ಮಂಡಿಸಿದೆ.
ಬುಧವಾರ ನಗರಸಭಾ ಸಭಾಂಗಣದಲ್ಲಿ ಅಧ್ಯಕ್ಷ ದೇವರಾಜ್‌ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಮಂಡನಾ ಸಭೆಯಲ್ಲಿ 2016-17ನೆ ಸಾಲಿನಲ್ಲಿ ನಗರಸಭೆಯ ಎಲ್ಲ ಆದಾಯ ಮೂಲಗಳಿಂದಲೂ 9,977.65 ಲಕ್ಷ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ. ಅಭಿವೃದ್ಧಿಪರ ಮತ್ತು ಜನ ಸ್ನೇಹಿಯಾದ ದೂರದೃಷ್ಟಿಯುಳ್ಳ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು 9,499.10ಲಕ್ಷ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಈ ಎಲ್ಲ ವೆಚ್ಚಗಳ ನಂತರವೂ ನಗರ ಸಭೆಯಲ್ಲಿ 478.55 ಲಕ್ಷ ರೂ. ಉಳಿಕೆಯಾಗಲಿದೆ. ಆಯವ್ಯಯ ತಯಾರಿಕೆಯ ಪೂರ್ವಭಾವಿಯಾಗಿ 2 ಸುತ್ತಿನ ಸಮಾಲೋಚನಾ ಸಭೆಗಳನ್ನು ನಡೆಸಿದ ಸಂದರ್ಭದಲ್ಲಿ ವಿವಿಧ ಸಂಘಸಂಸ್ಥೆಗಳು ನೀಡಿದ ಸಲಹೆಗಳನ್ನು, ಅಭಿಪ್ರಾಯಗಳನ್ನು ಪರಿಗಣಿಸಿ ಬಜೆಟ್ ಮಂಡಿಸಲಾಗಿದೆ.
2016-17ನೆ ಸಾಲಿನ ರಾಜಸ್ವ ಖಾತೆಯಲ್ಲಿ ಆಸ್ತಿ ತೆರಿಗೆ 800 ಲಕ್ಷ ರೂ., ಕಟ್ಟಡ ಪರವಾನಗಿ 30 ಲಕ್ಷ ರೂ., ವಾಣಿಜ್ಯ ಮಳಿಗೆ ಬಾಡಿಗೆ 150 ಲಕ್ಷ ರೂ., ಅಭಿವೃದ್ಧಿ ಶುಲ್ಕ 35 ಲಕ್ಷ ರೂ., ವ್ಯಾಪಾರ ಪರವಾನಿಗೆ ಶುಲ್ಕ 30 ಲಕ್ಷ ರೂ., ಮಾರುಕಟ್ಟೆ ಶುಲ್ಕ 15 ಲಕ್ಷ ರೂ., ಖಾತೆ ಬದಲಾವಣೆ ಶುಲ್ಕ 10 ಲಕ್ಷ ರೂ., ಅನುಪಯುಕ್ತ ಸಾಮಗ್ರಿ ಮಾರಾಟದಿಂದ 3 ಲಕ್ಷ ರೂ., ಎಸ್‌ಎಫ್‌ಸಿ ವೇತನ ಬಾಬ್ತು 550 ಲಕ್ಷ ರೂ., ವಿದ್ಯುತ್ ಅನುದಾನ 370 ಲಕ್ಷ ರೂ., ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ 650 ಲಕ್ಷ ರೂ., ಎಂ.ಜಿ.ರಸ್ತೆ ಮತ್ತು ಮಾರುಕಟ್ಟೆ ರಸ್ತೆ ವಾಹನ ನಿಲುಗಡೆ ಶುಲ್ಕ 10 ಲಕ್ಷ ರೂ., ನಿವೇಶನ ಮಾರಾಟದಿಂದ 200 ಲಕ್ಷ ರೂ. ನಿರೀಕ್ಷಿಸಲಾಗಿದ್ದು, ಒಟ್ಟು 3,178.50 ಲಕ್ಷ ರೂ. ಆಗಲಿವೆ.
ಅಸಾಮಾನ್ಯ ಖಾತೆಗಳಾದ ಅಮೃತ್ ಯೋಜನೆ 2,400 ಲಕ್ಷ ರೂ., ಆಶ್ರಯ ಸಾಲ ಯೋಜನೆ 50 ಲಕ್ಷ ರೂ., 14ನೆ ಹಣಕಾಸು ಅನುದಾನ 300 ಲಕ್ಷ ರೂ., ಶಾಸಕರ ಪ್ರದೇಶಾಭಿವೃದ್ಧಿಯಿಂದ 10 ಲಕ್ಷ ರೂ., ಠೇವಣಿಗಳಿಂದ 110 ಲಕ್ಷ ರೂ., ನರ್ಮ್ ಯೋಜನೆಗಳಿಂದ 100ಲಕ್ಷ ರೂ. ನಿರೀಕ್ಷೆಯನ್ನು ಸೇರಿಸಿ 4,877 ಲಕ್ಷ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ. ಪ.ಜಾತಿ ಮತ್ತು ಪ.ವರ್ಗಗಳ ಅಭಿವೃದ್ಧಿಗೆ 220 ಲಕ್ಷ ರೂ., ಇತರೆ ಬಡಜನರ ಅಭಿವೃದ್ಧಿಗೆ 48 ಲಕ್ಷ ರೂ., ವಿಶೇಷ ಚೇತನದ ಅಭಿವೃದ್ಧಿಗೆ 28 ಲಕ್ಷ ರೂ. ಕಾಯ್ದಿರಿಸಲಾಗಿದೆ.
ಈಗಾಗಲೇ ನಗರಸಭಾ ನಿಧಿ ಎಸ್‌ಎಫ್‌ಸಿ, 14ನೆ ಹಣಕಾಸು ಯೋಜನೆಗಳಡಿಯಲ್ಲಿ ಶೇ.60ರಷ್ಟು ರಸ್ತೆ, ಚರಂಡಿ, ಕುಡಿಯುವ ನೀರಿನ ಯೋಜನೆಗಳನ್ನು ಅಭಿವೃದ್ಧಿಗೊಳಿಸಲಾಗಿದ್ದು, ಉಳಿಕೆ ಕಾಮಗಾರಿ ನಿರ್ವಹಿಸಲು 785 ಲಕ್ಷ ರೂ. ಮೀಸಲಿರಿಸಲಾಗಿದೆ. ನಗರದಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಅಮೃತ್ ಯೋಜನೆಯಡಿ 24 ಗಂಟೆಗಳ ಕಾಲ ನೀರು ಒದಗಿಸಲು ಈಗಾಗಲೇ ಕ್ರಿಯಾ ಯೋಜನೆ ಮಂಜೂರಾಗಿದೆ. ಈ ಯೋಜನೆಯು 5 ವರ್ಷದ ಯೋಜನೆಯಾಗಿದ್ದು, ಈ ವರ್ಷಕ್ಕೆ 24 ಕೋಟಿ ರೂ. ಅನುದಾನ ನಿಗದಿಯಾಗಿದೆ.
ನಗರದಲ್ಲಿ ಹಲವೆಡೆ ತಳ್ಳುಗಾಡಿಗಳಲ್ಲಿ ತಿಂಡಿ-ತಿನಿಸು ಮಾರಾಟ ಮಾಡುತ್ತಿರುವುದರಿಂದ ನೈರ್ಮಲ್ಯಕ್ಕೆ ಕುಂದು ಉಂಟಾಗುತ್ತಿದ್ದು, ನಗರದ ಹಳೆ ಜೈಲಿನ ಜಾಗದಲ್ಲಿ ಫುಡ್‌ಕೋರ್ಟ್ ನಿರ್ಮಾಣ ಮಾಡಲು ನಿರ್ಧರಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅದಕ್ಕೆಂದು 50 ಲಕ್ಷ ರೂ. ಮೀಸಲಿಡಲಾಗಿದೆ. ನಗರದ ವಿವಿಧೆಡೆ ಅಮೃತ್ ಯೋಜನೆಯಡಿ ಉದ್ಯಾನವನಗಳ ಅಭಿವೃದ್ಧಿ, ವಿವಿಧೆಡೆ ಶೌಚಾಲಯ ನಿರ್ಮಾಣ ಕಾಮಗಾರಿಗಳು ಕೈಗೆತ್ತಿಕೊಂಡು ಪ್ರಗತಿಯ ಹಂತದಲ್ಲಿದೆ.
ಕಳೆದ ಬಾರಿಯ ಬಜೆಟ್‌ನಲ್ಲಿ ಅಳವಡಿಸಿರುವಂತೆ ಬಾಳೆಹಳ್ಳಿ, ಕರ್ಕಿಪೇಟೆ, ಹಾಲೇನಹಳ್ಳಿ, ಕೆಂಪನಹಳ್ಳಿ, ಉಂಡೇದಾಸರಹಳ್ಳಿ, ಗೌರಿಕಾಲುವೆ, ಶಂಕರಪುರ, ಟಿಪ್ಪುನಗರ, ತಮಿಳು ಕಾಲನಿಯಲ್ಲಿರುವ ಅಂಗನವಾಡಿಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆ.
ಸಂಘಸಂಸ್ಥೆ, ಶಾಲಾ ಕಾಲೇಜ್ ವಿದ್ಯಾರ್ಥಿಗಳು, ಸಾಂಸ್ಕೃತಿಕ ವಲಯದವರಿಗೆ ಸಹಾಯ ಮಾಡಲು 5ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ವಸತಿ ಯೋಜನೆಯಡಿ 747 ಪ.ಜಾತಿ ಮತ್ತು ಪ.ಪಂಗಡದವರಿಗೆ ತಲಾ 25 ಸಾವಿರ ರೂ. ಅಂತೆ 2 ಕೋಟಿ ಪಾವತಿಸಲಾಗುವುದು.
ಹಿಂದೂ ಮುಸಾಫಿರ್‌ಖಾನ, ಹಳೇ ತರಕಾರಿ ಮಾರುಕಟ್ಟೆ ಖಾಲಿ ನಿವೇಶನಗಳಲ್ಲಿ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣಗಳ ನಿರ್ಮಾಣ, ವಿಕಲ ಚೇತನರಿಗೆ ಶೇ.3ರ ಅನುದಾನದಲ್ಲಿ ತ್ರಿಚಕ್ರ ಮೋಟಾರ್‌ವಾಹನ ಸರಬರಾಜಿಗೆ ಕ್ರಮ ಕೈಗೊಂಡಿರುವುದು, ನಗರವನ್ನು ಹಸಿರೀಕರಣಗೊಳಿಸಲು ಗಿಡಗಳನ್ನು ನೆಟ್ಟು ಟ್ರೀ ಗಾರ್ಡ್‌ಗಳನ್ನು ವಿತರಣೆ ಮಾಡುವುದು, ನಗರಸಭೆ ವ್ಯಾಪ್ತಿಯ ಆಯ್ದ ವಾರ್ಡ್‌ಗಳಲ್ಲಿ ಎಲ್‌ಇಡಿ ದೀಪ ಅಳವಡಿಸಲು ಯೋಜಿಸಲಾಗಿದೆ.
ನಗರದಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಸ್ವಚ್ಛವಾಗಿ ಇಟ್ಟುಕೊಳ್ಳದ ಖಾಲಿ ನಿವೇಶನಗಳಿಗೆ 5 ಸಾವಿರ ರೂ. ದಂಡ ವಿಧಿಸುವುದು, 10 ಚದರಕ್ಕಿಂತ ಹೆಚ್ಚು ವಿಸ್ತೀರ್ಣದ ವಾಣಿಜ್ಯ ಕಟ್ಟಡಗಳಿಗೆ ಕಾರ್‌ಪಾರ್ಕಿಂಗ್, ಸೋಲಾರ್ ವಾಟರ್ ಹೀಟರ್, ಮಳೆ ನೀರು ಕೊಯ್ಲು ಪದ್ಧತಿ, ಕಡ್ಡಾ ಯಗೊಳಿಸಲಾಗಿದ್ದು, ಉಲ್ಲಂಘಿಸಿದವರಿಗೆ ಪರವಾನಿಗೆ ರದ್ದುಗೊಳಿಸುವ ವಿಚಾರವೂ ಬಜೆಟ್‌ನಲ್ಲಿ ಸೇರ್ಪಡೆಗೊಂಡಿದೆ.





