ಚರ್ಮದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ: ಶರಣಪ್ರಕಾಶ್ ಪಾಟೀಲ್
ಸ್ಕಿನ್ ಬ್ಯಾಂಕ್‌ಗೆ ಚಾಲನೆ

ಬೆಂಗಳೂರು, ಮಾ.30: ರಕ್ತದಾನ, ನೇತ್ರದಾನದಂತೆ ಚರ್ಮದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಬುಧವಾರ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಿರುವ ಸ್ಕಿನ್ ಬ್ಯಾಂಕ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ, ನೇತ್ರದಾನ ಸೇರಿದಂತೆ ವಿವಿಧ ಅಂಗಾಂಗ ದಾನದಂತೆ ಚರ್ಮದಾನ ಮಾಡುವುದರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ವ್ಯಕ್ತಿ ಸತ್ತ 6 ಗಂಟೆಯೊಳಗೆ ಚರ್ಮವನ್ನು ದಾನ ಮಾಡಬಹುದು. ಇದರಿಂದ ಬೆಂಕಿ ಮತ್ತಿತರ ಸುಟ್ಟ ಗಾಯಗಳಾದವರಿಗೆ ಅನುಕೂಲವಾಗಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದಲ್ಲೂ ಇಂತಹ ಚರ್ಮ ಬ್ಯಾಂಕ್ ಸ್ಥಾಪಿಸಲು ಸರಕಾರ ಚಿಂತಿಸಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಹಂತ ಹಂತವಾಗಿ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ದೇಶದಲ್ಲಿ ಆರನೇ ಹಾಗೂ ರಾಜ್ಯದಲ್ಲಿ ಮೊದಲ ಚರ್ಮ ಬ್ಯಾಂಕ್ ಇದಾಗಿದೆ. ಬೆಂಕಿ ಆಕಸ್ಮಿಕಗಳಿಂದ ಉಂಟಾದ ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಸ್ಕಿನ್ ಬ್ಯಾಂಕ್ ಸಹಕಾರಿಯಾಗಿದೆ. ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಆಶೀರ್ವಾದ್ ಪೈಪ್ಸ್ ಮತ್ತು ರೋಟರಿ ಬೆಂಗಳೂರು ಮಿಡ್‌ಟೌನ್‌ನ ಸಹಕಾರದೊಂದಿಗೆ ಸ್ಕಿನ್ ಬ್ಯಾಂಕ್ ಆರಂಭಿಸಲಾಗಿದೆ. ಬಡ ಜನರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು. ಆಶೀರ್ವಾದ್ ಪೈಪ್ಸ್‌ನ ಆಡಳಿತಾಧಿಕಾರಿ ಪವನ್ ಪೊದ್ದಾರ್ ಮಾತನಾಡಿ, ವಿಕ್ಟೋರಿಯಾ ಸುಟ್ಟ ಗಾಯಗಳ ಕೇಂದ್ರಕ್ಕೆ ಪ್ರತಿ ತಿಂಗಳು 160ರಿಂದ 180 ರಷ್ಟು ರೋಗಿಗಳು ದಾಖಲಾಗುತ್ತಾರೆ. ಆಸ್ಪತ್ರೆಯ ಸಿಬ್ಬಂದಿಗಳು ರಾಷ್ಟ್ರೀಯ ಸುಟ್ಟ ಗಾಯಗಳ ಕೇಂದ್ರ ಸಿಬ್ಬಂದಿಗೆ ತರಬೇತಿ ಹಾಗೂ ಸಹಕಾರ ನೀಡಿದೆ. ಯಾವುದೇ ಸಮಸ್ಯೆಗಳು ಉಂಟಾಗದ ರೀತಿಯಲ್ಲಿ ರಕ್ತಸ್ರಾವ ಹಾಗೂ ದೇಹ ರೂಪಗೊಳ್ಳದಂತೆ ಚರ್ಮವನ್ನು ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು. ಚರ್ಮದಾನ ಮಾಡುವುದಕ್ಕೆ ಅರ್ಜಿಗಳ ಮೂಲಕ ನೋಂದಾಯಿಸಿಕೊಳ್ಳಬಹುದು. ದಿನದ 24 ಗಂಟೆಗಳು ಸಹ ಚರ್ಮದಾನ ಸಹಾಯವಾಣಿ ಸಂಖ್ಯೆ 080-26701150/9845192337 ಸಂಪರ್ಕಿಸಲು ಕೋರಿದರು.
ಈ ಸಂದರ್ಭದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಡೀನ್ ಡಾ.ದೇವದಾಸ್, ದೀಪಕ್ ಪೊದ್ದಾರ್, ಕಾಸ್ ಪೊದ್ದಾರ್, ಡಾ.ರಮೇಶ್, ಡಾ.ಸ್ಮಿತಾ ಸೇಗು, ರೋಟರಿ ಅಧ್ಯಕ್ಷ ಸತೀಶ್, ಡಾ.ಗುಣಶೇಖರ್, ಅನಿಲ್, ಡಾ.ರಮೇಶ್ ಉಪಸ್ಥಿತರಿದ್ದರು.







