‘ಎಸಿಬಿ ರಚನೆಯಿಂದ ಲೋಕಾಯುಕ್ತಕ್ಕೆ ಧಕ್ಕೆಯಿಲ್ಲ’

ಬೆಂಗಳೂರು, ಮಾ, 30: ರಾಜ್ಯ ಸರಕಾರವು ರಚನೆ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಿಂದ ಲೋಕಾಯುಕ್ತದ ಅಧಿಕಾರಕ್ಕೆ ಯಾವುದೇ ರೀತಿಯ ಧಕ್ಕೆ ಬರುವುದಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಾ ಯುಕ್ತದಲ್ಲಿದ್ದ ಭ್ರಷ್ಟಾಚಾರ ನಿಯಂತ್ರಣ ವಿಧೇಯಕದ ಅನ್ವಯ ಪೊಲೀಸ್ ವಿಭಾಗವನ್ನು ಪ್ರತ್ಯೇಕಗೊಳಿಸಿ ಎಸಿಬಿ ಯನ್ನು ರಚನೆ ಮಾಡಲಾಗಿದೆ ಎಂದರು.
ಲೋಕಾಯುಕ್ತದಲ್ಲಿ ಸಾರ್ವಜನಿಕರು ದೂರು ದಾಖಲು ಮಾಡಲು ಅವಕಾಶ ವಿದೆ. ಅದೇ ರೀತಿ ಎಸಿಬಿಯಲ್ಲಿ ದೂರುಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಪೊಲೀಸ್ ಕಾಯ್ದೆಯಡಿಯಲ್ಲಿ ಪೊಲೀಸ್ ಅಧಿಕಾರಿಗಳು ಸ್ವತಂತ್ರವಾಗಿ ತಮ್ಮ ಕರ್ತವ್ಯ ನಿರ್ವಹಿಸಲು ಎಸಿಬಿ ಅನುಕೂಲ ಕಲ್ಪಿಸಲಿದೆ ಎಂದು ಓಂಪ್ರಕಾಶ್ ಹೇಳಿದರು.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ದೂರುಗಳನ್ನು ದಾಖಲಿಸಿಕೊಳ್ಳುವ ಅಥವಾ ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತ ಪೊಲೀಸರಿಗೆ ಇಲ್ಲ. ಆಡಳಿತ ಸುಧಾರಣೆಯ ವಿಚಾರದಲ್ಲಿ ಮಾತ್ರ ಲೋಕಾಯುಕ್ತರು, ಉಪ ಲೋಕಾಯುಕ್ತರಿಗೆ ಸಹಾಯ ಮಾಡಬಹುದಾಗಿದೆ. ಅಲ್ಲದೆ, ಲೋಕಾಯುಕ್ತ ಪೊಲೀಸರಿಗೆ ಠಾಣೆಯ ಸ್ಥಾನಮಾನವು ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ ಸೇರಿದಂತೆ ದೇಶದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎಸಿಬಿಯನ್ನು ಈಗಾಗಲೇ ರಚನೆ ಮಾಡ ಲಾಗಿದೆ. ಕರ್ನಾಟಕವೇ ಈ ನಿಟ್ಟಿನಲ್ಲಿ ಮೊದಲ ರಾಜ್ಯವೇನಲ್ಲ ಎಂದ ಅವರು, ಎಸಿಬಿ ಸಂಸ್ಥೆಯು ಭ್ರಷ್ಟಾಚಾರ ನಿಗ್ರಹದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಸಿಬಿ ಸಂಸ್ಥೆಗೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯಿದ್ದು, ಓರ್ವ ಎಡಿಜಿಪಿ, ನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ತಲಾ ಒಬ್ಬರು ಐಜಿಪಿ ಸೇರಿದಂತೆ ನಾಲ್ವರು ಎಸ್ಪಿಗಳಿರುತ್ತಾರೆ. ಆಡಳಿತ ವ್ಯವಸ್ಥೆ ನೋಡಿಕೊಳ್ಳಲು ಇಬ್ಬರು ಎಸ್ಪಿಗಳು ಹಾಗೂ ಬೆಂಗಳೂರು, ಮಂಗಳೂರು, ಮೈಸೂರು, ಕಲಬುರ್ಗಿ, ಬೆಳಗಾವಿ ಹಾಗೂ ದಾವಣಗೆರೆ ವಲಯಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಅವರು ಹೇಳಿದರು. ಎಸಿಬಿ ಸಂಪೂರ್ಣವಾಗಿ ತನ್ನ ಕಾರ್ಯಭಾರವನ್ನು ಆರಂಭಿಸುವವರೆಗೆ ರಾಜ್ಯದಲ್ಲಿನ 965 ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ದಾಖಲಿಸಬಹುದಾಗಿದೆ. ಇನ್ನು ಒಂದು ವಾರದೊಳಗೆ ಎಸಿಬಿ ತನ್ನ ಕಾರ್ಯಾಚರಣೆ ಆರಂಭಿಸಲಿದೆ ಎಂದು ಓಂಪ್ರಕಾಶ್ ಹೇಳಿದರು.
ಎಸಿಬಿ ವಲಯ ಎಸ್ಪಿಗಳ ನೇಮಕ?
ಮಂಗಳೂರು(ಪಶ್ಚಿಮ ವಲಯ)- ಚನ್ನಬಸವಣ್ಣ ಎಲ್.ಲಂಗೋಟಿ, ಮೈಸೂರು (ದಕ್ಷಿಣ ವಲಯ)- ಬಿ.ಟಿ.ಕವಿತಾ, ಕಲಬುರಗಿ(ಈಶಾನ್ಯ ವಲಯ)- ಅನಿತಾ ಬಿ.ಹದ್ದಣ್ಣನವರ್, ಬೆಳಗಾವಿ(ಉತ್ತರ ವಲಯ)- ಸಂಜೀವ್ ಎಂ.ಪಾಟೀಲ್, ದಾವಣಗೆರೆ(ಪೂರ್ವ ವಲಯ)- ಎಂ.ಪುಟ್ಟಮಾದಯ್ಯ, ಬೆಂಗಳೂರು (ಕೇಂದ್ರ ವಲಯ)- ಸೌಮ್ಯಲತಾರನ್ನು ನೇಮಕಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.







