ಕಿಡ್ನಿದಾನ ಜಾಗೃತಿಗಾಗಿ ಕಾರಿನಲ್ಲಿ ವಿದೇಶ ಪ್ರವಾಸ

ಬೆಂಗಳೂರು, ಮಾ. 30: ಕಿಡ್ನಿದಾನಿ ಅನಿಲ್ ಶ್ರೀವತ್ಸ ವಿದೇಶಗಳಲ್ಲಿ ಕಿಡ್ನಿದಾನದ ಕುರಿತು ಅರಿವು ಮೂಡಿಸಲು ಹಮ್ಮಿಕೊಂಡಿರುವ ಪ್ರವಾಸಕ್ಕೆ ಇಂದು ನಗರದ ಪ್ರೆಸ್‌ಕ್ಲಬ್ ಆವರಣದಲ್ಲಿ ಕೊಲಂಬಿಯ ಏಷಿಯಾ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಪ್ರಶಾಂತ್ ಚಾಲನೆ ನೀಡಿದರು.
ಪ್ರವಾಸಕ್ಕೆ ಚಾಲನೆ ನೀಡುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಡ್ನಿದಾನದ ಕುರಿತು ಜನರಲ್ಲಿ ಅರಿವು ಮೂಡಿಸುವ ಸದುದ್ದೇಶದಿಂದ ಅನಿಲ್ ಪ್ರವಾಸ ಕೈಗೊಂಡಿದ್ದಾರೆ. ಆರೋಗ್ಯವಂತ ವ್ಯಕ್ತಿಗಳ ಒಂದು ಕಿಡ್ನಿಯನ್ನು ಕಿಡ್ನಿ ವೈಫಲ್ಯ ಹೊಂದಿರುವ ಸಂತ್ರಸ್ತರಿಗೆ ದಾನ ಮಾಡುವುದರಿಂದ ದೇಹದ ಮೇಲೆ ಯಾವ ರೀತಿಯೂ ಪ್ರತಿಕೂಲ ಪರಿಣಾಮ ಆಗುವುದಿಲ್ಲ ಎಂದರು.
ಕಿಡ್ನಿದಾನ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಕೆಟ್ಟ ಅಭಿಪ್ರಾಯದಿಂದ ದಾನ ಮಾಡಲು ಹಿಂದೆ ಸರಿಯುತ್ತಾರೆ. ತಮ್ಮಲ್ಲಿನ ಎರಡರಲ್ಲಿ ಒಂದು ಕಿಡ್ನಿಯನ್ನು ದಾನ ಮಾಡಿದ ನಂತರ ಕೆಲವೇ ದಿನಗಳಲ್ಲಿ ಮೊದಲಿನಂತೆ ಜೀವನ ನಡೆಸಬಹುದು. ಅಲ್ಲದೆ ಕಿಡ್ನಿ ದಾನದಿಂದ ಇನ್ನೊಂದು ಅಮೂಲ್ಯಜೀವವನ್ನು ಉಳಿಸಿದ ಸಾರ್ಥಕತೆಯಿರುತ್ತದೆ ಎಂದರು.
ಪ್ರವಾಸಿ ಹಾಗೂ ಕಿಡ್ನಿದಾನಿ ಅನಿಲ್ ಶ್ರೀವತ್ಸ ಮಾತನಾಡಿ, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನನ್ನ ಸಹೋದರ ಡಾ. ಅರ್ಜುನ್‌ಗೆ ಕಿಡ್ನಿದಾನ ಮಾಡಲು ಯಾರೂ ಮುಂದಾಗಲಿಲ್ಲ. ಈ ಸನ್ನಿವೇಶದಲ್ಲಿ ನನ್ನ ಸಹೋದರನಿಗೆ ಕಿಡ್ನಿದಾನ ಮಾಡಲು ನನ್ನಲಿಯೂ ಹಿಂಜರಿಕೆಯಿತ್ತು. ಆದರೆ ವೈದ್ಯರೊಂದಿಗಿನ ಸೂಕ್ತ ಸಮಾಲೋಚನೆ ಮತ್ತು ಮಾರ್ಗದರ್ಶನದಿಂದ ಕಿಡ್ನಿಯನ್ನು ದಾನ ಮಾಡಿದೆ. ಸದ್ಯ ನಾನೂ ಮತ್ತು ನನ್ನ ಸಹೋದರ ಆರೋಗ್ಯವಂತರಾಗಿದ್ದೇವೆ ಎಂದು ಸಂತಸ ಹಂಚಿಕೊಂಡರು.
ಪ್ರವಾಸವನ್ನು ನನ್ನ ಕುಟುಂಬ ಸದಸ್ಯ ರೊಂದಿಗೆ ಕೈಗೊಳ್ಳುತ್ತಿದ್ದು, ಪ್ರವಾಸಕ್ಕೆ ಕೊಲಂಬಿಯ ಏಷಿಯಾ ಆಸ್ಪತ್ರೆ ಮತ್ತು ಇತರೆ ಸರಕಾರೇತರ ಸಂಘ ಸಂಸ್ಥೆಗಳು ಆರ್ಥಿಕ ನೆರವು ನೀಡಿವೆ. ಪ್ರವಾಸವನ್ನು ನಗರದಿಂದ ಸ್ಕಾಟ್‌ಲ್ಯಾಂಡ್‌ವರೆಗೂ ಕಾರಿನಲ್ಲಿ ಒಟ್ಟು 80 ದಿನಗಳ ಕಾಲ ಹಮ್ಮಿಕೊಂಡಿದ್ದೇನೆ. ಪ್ರವಾಸದ ಮಾರ್ಗ ಮಧ್ಯೆ ಸಿಗುವ ಬರ್ಮಾ, ಚೈನಾ, ರಷ್ಯಾ, ಸ್ವೀಡನ್, ಪ್ರಾನ್ಸ್ ಸೇರಿದಂತೆ ಒಟ್ಟು 17 ದೇಶಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಈ ಪ್ರವಾಸದಿಂದ ಹಿಂದಿರುಗಿದ ನಂತರ ದೇಶಾದ್ಯಂತ ಜಾಗೃತಿ ಮೂಡಿಸಲು ಪ್ರವಾಸ ಹಮ್ಮಿಕೊಳ್ಳ ಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಸುಂದರ್, ಡಾ. ಕಾಂಚನಾ ಮತ್ತಿತರರು ಉಪಸ್ಥಿತರಿದ್ದರು.







