ಎಸಿಬಿ ವಿರೋಧಿಸಿ ಆಪ್ ಕಾರ್ಯಕರ್ತರಿಂದ ಕೇಶಮುಂಡನ

ಬೆಂಗಳೂರು,ಮಾ.30: ರಾಜ್ಯ ಸರಕಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇಂದು ಕೇಶಮುಂಡನ ಮಾಡಿಸಿಕೊಂಡು ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಮೌರ್ಯ ವೃತ್ತದಲ್ಲಿರುವ ಗಾಂ ಪ್ರತಿಮೆ ಎದುರು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಸೇರಿದಂತೆ ಪಕ್ಷದ ಹಲವು ಕಾರ್ಯಕರ್ತರು ಕೇಶಮುಂಡನ ಮಾಡಿಸಿಕೊಂಡು ಎಸಿಬಿ ರಚನೆ ಮಾಡಿರುವುದನ್ನು ಖಂಡಿಸಿದರು. ಆಡಳಿತರೂಢ ಕಾಂಗ್ರೆಸ್ ಪಕ್ಷ ಸೇರಿದಂತೆ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಪಕ್ಷಗಳಿಗೂ ಭ್ರಷ್ಟಾಚಾರ ನಿಗ್ರಹಿಸುವ ಲೋಕಾಯುಕ್ತ ಬೇಕಿಲ್ಲ. ಅವರ ಭ್ರಷ್ಟಾಚಾರ ಹಗರಣಗಳಿಂದ ತಪ್ಪಿಸಿಕೊಳ್ಳಲು ಅವರಿಗೆ ಎಸಿಬಿ ಬೇಕಾಗಿದೆ. ಅದಕ್ಕಾಗಿಯೇ ಎಲ್ಲರೂ ಸೇರಿ ಎಸಿಬಿ ರಚಿಸಿಕೊಂಡಿದ್ದಾರೆ ಎಂದು ದೂರಿದರು.
ಲೋಕಾಯುಕ್ತ ಬಲಗೊಂಡರೆ ಆಡಳಿತ ಕಾಂಗ್ರೆಸ್ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಪಕ್ಷಗಳ ಹಲವು ಮುಖಂಡರು ಹಾಗೂ ಶಾಸಕರು ಜೈಲು ಸೇರುವ ಸಂಭವವಿದೆ. ಅದರಿಂದಾಗಿಯೇ ಲೋಕಾಯುಕ್ತವನ್ನು ದುರ್ಬಲಗೊಳಿಸಿ ರಕ್ಷಣೆಯ ಮಾರ್ಗವಾಗಿ ಎಸಿಬಿ ರಚಿಸಿಕೊಂಡಿದ್ದಾರೆ. ಇದರ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ಪ್ರತಿದಿನ ಒಬ್ಬೊಬ್ಬರು ಕೇಶಮುಂಡನ ಹಾಗೂ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಅವರು ಹೇಳಿದರು.





