ವಾಮಾಚಾರಕ್ಕೆ ಮಗು ಬಲಿ ಪ್ರಕರಣ; ಆರೋಪ ಸಾಬೀತು
ಶಿಕ್ಷೆಯ ಪ್ರಮಾಣ ಪ್ರಕಟ ಸಾಧ್ಯತೆ
ಮಂಗಳೂರು, ಮಾ. 30: ಇಲ್ಲಿನ ಯೆಯ್ಯಡಿ ಶರಬತ್‌ಕಟ್ಟೆ ಬಾರೆಬೈಲ್ ಬಳಿ ಐದು ವರ್ಷಗಳ ಹಿಂದೆ ನಡೆದ ವಾಮಾಚಾರವೊಂದರ ಪ್ರಕರಣದ ತೀರ್ಪು ಇಂದು ಹೊರಬಿದ್ದಿದೆ.
ಕಮಲಾಕ್ಷ ಪುರುಷ (80) ಹಾಗೂ ಆತನ ಸಾಕು ಪುತ್ರಿ ಚಂದ್ರಕಲಾ (30) ಅಪರಾಧಿಗಳು ಎಂದು ಮಂಗಳೂರಿನ ನಾಲ್ಕನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ತೀರ್ಪು ನೀಡಿದ್ದಾರೆ. 2010ರ ಡಿಸೆಂಬರ್ 16ರಂದು ವಾಮಾಚಾರ ನಡೆಸಿ ಹೆಣ್ಣು ಮಗುವನ್ನು ಹತ್ಯೆಗೈಯ್ಯಲಾಗಿತ್ತು. ಬಾಡಿಗೆ ಮನೆಯಲ್ಲಿ ವಾಸವಿದ್ದ ಬಿಹಾರ ಮೂಲದ ಪೀರಣ್ ಕುಮಾರ್ ಝಾ ಮತ್ತು ಅಂಜಲಿದೇವಿ ದಂಪತಿಯ ಮೂರುವರೆ ವರ್ಷ ಪ್ರಾಯದ ಹೆಣ್ಣು ಮಗು ಪ್ರಿಯಾಂಕಾ ಎಂಬಾಕೆಯನ್ನು ಕಮಾಲಾಕ್ಷ ಪುರುಷ ಹಾಗೂ ಚಂದ್ರಕಲಾ ಕತ್ತು ಹಿಸುಕಿ ಹತ್ಯೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಕದ್ರಿ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ನಿರಂಜನ್ ರಾಜ್ ಅರಸ್ ಪ್ರಕರಣದ ತನಿಖೆ ನಡೆಸಿ ಬಳಿಕ ಅಂದಿನ ಎಸಿಪಿ ರವೀಂದ್ರ ಗಡದಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ಬಗ್ಗೆ ವಿಚಾರಣೆ ನಡೆಸಿದ್ದ ಮಂಗಳೂರಿನ ನಾಲ್ಕನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಾದ ಪ್ರತಿವಾದಗಳನ್ನು ಆಲಿಸಿ 18 ಮಂದಿಯ ಸಾಕ್ಷಿ ವಿಚಾರಣೆ ನಡೆಸಿತ್ತು. ಅಂತಿಮವಾಗಿ ಕಮಲಾಕ್ಷ ಹಾಗೂ ಚಂದ್ರಕಲಾ ತಪ್ಪಿತಸ್ಥರು ಎಂದು ನಾಯಾಧೀಶರು ತೀರ್ಪು ನೀಡಿದ್ದಾರೆ.
ಅಪರಾಧಿಗಳಿಗೆ ಮಾರ್ಚ್ 1ರಂದು ಶಿಕ್ಷೆ ಪ್ರಮಾಣ ಪ್ರಕಟವಾಗುವ ಸಾಧ್ಯತೆ ಇದೆ. ಪ್ರಾಸಿಕ್ಯೂಶನ್ ಪರವಾಗಿ ಆರಂಭದಲ್ಲಿ ಸರಕಾರಿ ಅಭಿಯೋಜಕ ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರು. ಬಳಿಕ ಹರೀಶ್ಚಂದ್ರ ಉದ್ಯಾವರ ವಾದ ಮಂಡಿಸಿದರು.







