ಹೆದ್ದಾರಿಗೆ ಟ್ರೀ ಪಾರ್ಕ್ ನೆಲಸಮ ಸಾಧ್ಯತೆ
ಹಣ ಪೋಲು ತಡೆಯುವಂತೆ ಮನವಿ
ಬಂಟ್ವಾಳ, ಮಾ.30: ರಾಷ್ಟ್ರೀಯ ಹೆದ್ದಾರಿ 234 (ಮಂಗಳೂರು-ವಿಲ್ಲುಪುರಂ)ರ ಬಿ.ಸಿ.ರೋಡು ಮುಖ್ಯ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಯಾವುದೇ ನಿರಾಕ್ಷೇಪಣೆಯನ್ನು ಪಡೆಯದೆ 1.40 ಕೋಟಿ ರೂ.ವೆಚ್ಚದಲ್ಲಿ ಟ್ರೀ ಪಾರ್ಕ್ ನಿರ್ಮಾಣವಾಗುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಈ ಹೆದ್ದಾರಿಯ ರಸ್ತೆಗಳ ಅಗಲೀಕರಣವೂ ಪ್ರಾರಂಭವಾಗಲಿದ್ದು, ಈ ಸಂದರ್ಭ ಟ್ರೀ ಪಾರ್ಕ್ ನೆಲಸಮಗೊಳ್ಳುವ ಸಾಧ್ಯತೆ ಇದೆ. ಇದರಿಂದ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣ ಪೋಲಾಗಲಿದೆ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಲಖಿತ ದೂರು ಸಲ್ಲಿಸಿದ್ದಾರೆ. ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ ನೇತೃತ್ವದ ನಿಯೋಗ ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿ ಸಲ್ಲಿಸಿದ ಮನವಿಯಲ್ಲಿ ಬಿ.ಸಿ. ರೋಡು ಪೇಟೆ ಯಲ್ಲಿ ತಾಂಡವವಾಡುತ್ತಿರುವ ಕೆಲವೊಂದು ಸಮಸ್ಯೆಗಳ ಕುರಿತು ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 73 (ಮಂಗಳೂರು -ಹಾಸನ-ಬೆಂಗಳೂರು)ರಲ್ಲಿ ನಡೆದ ಚತುಷ್ಪಥ ಕಾಮಗಾರಿಯ ವೇಳೆ ಬಿ.ಸಿ.ರೋಡು ಪೇಟೆಯಲ್ಲಿ ಪ್ಲೈಓವರ್ ನಿರ್ಮಿಸಲಾಗಿದ್ದು, ಇದು ಸಂಪೂರ್ಣ ಅವೈಜ್ಞ್ಞಾನಿಕವಾಗಿದೆ. ಫ್ಲೈ ಓವರ್ ಮೇಲ್ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ವಾಹನ ಸಂಚಾರದ ವೇಳೆ ಕೆಳಗಿನ ಮುಖ್ಯ ರಸ್ತೆಯಲ್ಲಿ ತೆರಳುತ್ತಿರುವ ವಾಹನ ಸವಾರರು ಹಾಗೂ ಸಾರ್ವಜನಿಕರ ಮೇಲೆ ನೀರಿನ ಅಭಿಷೇಕವಾಗುತ್ತಲಿವೆ ಎಂದು ನಿಯೋಗ ದೂರಿದೆ.
ಪ್ರಧಾನಿಗೆ ದೂರು:
ಈ ಮಧ್ಯೆ ಬಿ.ಸಿ. ರೋಡು ಮುಖ್ಯವೃತ್ತ ಸೇರಿದಂತೆ ಪೇಟೆ ಯಾದ್ಯಂತ ಅನಧಿಕೃತ ಹೋರ್ಡಿಂಗ್, ಬ್ಯಾನರ್, ಬಂಟಿಂಗ್ಸ್‌ಗಳು ರಾರಾಜಿಸುತ್ತಿದೆ. ರಸ್ತೆ ಸುರಕ್ಷತೆಗೆ ಇದು ಸವಾಲಾಗಿದೆ. ಈ ನಿಟ್ಟಿನಲ್ಲಿ ಇವೆಲ್ಲವನ್ನೂ ತೆರವುಗೊಳಿಸಲು ಸ್ಥಳೀಯಾಡಳಿತಕ್ಕೆ ಆದೇಶಿಸಲು ಸಂಬಂಧ ಪಟ್ಟವರಿಗೆ ಸೂಚಿಸುವಂತೆ ಬಂಟ್ವಾಳ ಪುರಸಭಾ ವಿಪಕ್ಷ ಸದಸ್ಯ ಬಿ. ದೇವದಾಸ ಶೆಟ್ಟಿ, ಪ್ರಧಾನಿ ನರೇಂದ್ರ ಮೋದಿಗೆ ಲಿಖಿತ ಪತ್ರ ಬರೆದಿದ್ದಾರೆ.







