ನೀರು ಪೋಲು ಮಾಡಿದರೆ ಕಠಿಣ ಕ್ರಮದ ಎಚ್ಚರಿೆ: ಉಪ್ಪಿನಂಗಡಿ ಗ್ರಾಪಂ ಸಭೆ
ಉಪ್ಪಿನಂಗಡಿ, ಮಾ.30: ಕುಡಿಯುವ ನೀರನ್ನು ಪೋಲು ಮಾಡಿದರೆ ಮತ್ತು ಮಲಿನ ನೀರನ್ನು ಸಾರ್ವಜನಿಕ ಚರಂಡಿಗೆ ಬಿಟ್ಟರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ತಿಳಿಸಿದ್ದಾರೆ.
ಪಂಚಾಯತ್ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚಾಯತ್‌ನ ಕುಡಿಯುವ ನೀರನ್ನು ಹಲವರು ಕೃಷಿ ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ಬಳಸುವುದು ಕಂಡು ಬಂದಿದೆ. ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರವಿರುವುದರಿಂದ ಕುಡಿಯುವ ನೀರನ್ನು ದುರುಪಯೋಗಪಡಿಸುವುದು ಸರಿಯಲ್ಲ. ಎ.1ರ ಬಳಿಕ ಕುಡಿಯುವ ನೀರನ್ನು ದುರುಪಯೋಗಪಡಿಸುವುದು ಕಂಡು ಬಂದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು. ಕಡಿತಗೊಳಿಸಿದ್ದಕ್ಕೆ 200 ರೂ., ಮರು ಜೋಡಣೆಗೆ 300 ರೂ. ಹಾಗೂ ದಂಡವನ್ನು ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಸದಸ್ಯರಾದ ಸುರೇಶ್ ಅತ್ರಮಜಲು, ಸುನೀಲ್ ದಡ್ಡು, ಯು.ಟಿ. ತೌಸೀಫ್, ಉಮೇಶ್ ಗೌಡ, ಚಂದ್ರಶೇಖರ ಮಡಿವಾಳ, ಭಾರತಿ, ಝರೀನಾ, ಚಂದ್ರಾವತಿ, ಸುಶೀಲಾ, ಜಮೀಲಾ, ಯೋಗಿಣಿ, ರಮೇಶ್ ಭಂಡಾರಿ ಚರ್ಚೆ ಯಲ್ಲಿ ಪಾಲ್ಗೊಂಡರು. ಪಿಡಿಒ ಅಬ್ದುಲ್ ಅಸಫ್ ಅರ್ಜಿಗಳನ್ನು ವಿಲೇವಾರಿಗೊಳಿಸಿದರು. ಕಾರ್ಯದರ್ಶಿ ಕೀರ್ತಿಪ್ರಸಾದ್ ಸ್ವಾಗತಿಸಿ, ವಂದಿಸಿದರು.





