ಆಪದ್ಬಾಂಧವರಿಗೆ ಇನ್ನಿಲ್ಲ ಕಿರುಕುಳ

ನೂತನ ಕಾನೂನಿಗೆ ಸುಪ್ರೀಂ ಅಸ್ತು
ಹೊಸದಿಲ್ಲಿ, ಮಾ.30: ಅಪಘಾತದ ಸಂದರ್ಭದಲ್ಲಿ ಗಾಯಾಳುಗಳಿಗೆ ನೆರವಾಗುವ ಆಪದ್ಬಾಂಧವರಿಗೆ ಯಾವುದೇ ಕಿರುಕುಳವಾಗದಂತೆ ಅವರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರಕಾರದ ಅಧಿಸೂಚನೆಯೊಂದಕ್ಕೆ ಜಸ್ಟಿಸ್ ವಿ.ಗೋಪಾಲ ಗೌಡ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ತನ್ನ ಒಪ್ಪಿಗೆ ನೀಡಿದೆ. ಇದರ ಫಲವಾಗಿ ಇನ್ನು ಮುಂದೆ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಯಾ ಪೊಲೀಸರಿಗೆ ಮಾಹಿತಿ ನೀಡಲು ಯಾರೂ ಯಾವುದೇ ರೀತಿಯಲ್ಲಿ ಹಿಂಜರಿಯುವ ಅಗತ್ಯವಿಲ್ಲ.
ಕೋರ್ಟಿನ ಒಪ್ಪಿಗೆಯ ಹಿನ್ನೆಲೆಯಲ್ಲಿ ಸರಕಾರದ ನಿಯಮಾವಳಿಗಳು ಈಗ ಕಾನೂನಿನ ರೂಪ ಪಡೆದಿದ್ದು ಎಲ್ಲಾ ರಾಜ್ಯಗಳೂ ಇವುಗಳಿಗೆ ಬದ್ಧವಾಗ ಬೇಕಿದೆ.
ಅಪಘಾತದ ಆಪದ್ಬಾಂಧವರ ಹಿತಾಸಕ್ತಿಗಳನ್ನು ರಕ್ಷಿಸಲು ನೀತಿಗಳನ್ನು ರೂಪಿಸಬೇಕೆಂಬ ಸುಪ್ರೀಂ ಕೋರ್ಟ್ ಸಲಹೆಯ ಮೇರೆಗೆ ಮೇ 12, 2015 ರಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿತ್ತು.
ಎನ್‌ಜಿಒ ಸೇವ್‌ಲೈಫ್ ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ತನ್ನ ಅಪೀಲಿನಲ್ಲಿ ಫೌಂಡೇಶನ್ ದೇಶದಲ್ಲಿ 2014ರಲ್ಲಿ 4 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿವೆಯೆಂದೂ ಅಪಘಾತಗಳಲ್ಲಿ ಸಾವಿನ ಸಂಖ್ಯೆ 2013ರಲ್ಲಿ 1.37 ಲಕ್ಷದಿಂದ 2014ರಲ್ಲಿ 1.39 ಲಕ್ಷಕ್ಕೆ ಏರಿತ್ತೆಂದೂ ತಿಳಿಸಿತ್ತು.
ವಿಚಾರಣೆ ಸಂದರ್ಭ ಕೋರ್ಟಿನ ಮುಂದೆ ವೀಡಿಯೋ ಕಾನ್ಫರೆನ್ಸಿಂಗ್ ಮುಖಾಂತರ ಆತನ ಹೇಳಿಕೆಯನ್ನು ದಾಖಲಿಸಬಹುದು. ಆದರೆ ಆ ವ್ಯಕ್ತಿ ಸ್ವ ಇಚ್ಛೆಯಿಂದ ಕೋರ್ಟ್ ಮುಂದೆ ಹೇಳಿಕೆ ನೀಡಬಯಸಿದರೆ ಈ ಪ್ರಕ್ರಿಯೆಯನ್ನು ಒಂದೇ ವಿಚಾರಣಾವಧಿಯಲ್ಲಿ ಮುಗಿಸಬಹುದಾಗಿದೆ.ಆದರೆ ಒಬ್ಬ ಆಪದ್ಬಾಂಧವ ಸ್ವಇಚ್ಛೆಯಿಂದ ತನ್ನ ಹೆಸರನ್ನು ನೀಡುವುದಕ್ಕೆ ಯಾವುದೇ ಅಡ್ಡಿಯಿಲ್ಲವಾಗಿದೆ.
ಯಾವುದೇ ಆಸ್ಪತ್ರೆ ಕೂಡ ಆಪದ್ಬಾಂಧವನಿಂದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಪ್ರವೇಶಾತಿ ದರ ಅಥವಾ ರಿಜಿಸ್ಟ್ರೇಶನ್ ದರ ಪಾವತಿಸುವಂತೆ ಬೇಡಿಕೆ ಸಲ್ಲಿಸುವ ಹಾಗಿಲ್ಲ. ಕಾನೂನು ಸುವ್ಯವಸ್ಥೆ ರಾಜ್ಯಗಳ ಜವಾಬ್ದಾರಿಯಾಗಿರುವುದರಿಂದ ಕೇಂದ್ರ ಈ ಬಗ್ಗೆ ರಾಜ್ಯಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲವೆಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಕೋರ್ಟ್ ಮುಂದೆ ವಿಚಾರಣೆ ಸಂದರ್ಭ ವಾದಿಸಿದ್ದರು.







