ಪಾಕ್‌ನ ವೀಡಿಯೊ ತಿರಸ್ಕರಿಸಿದ ಭಾರತ
ಕುಲಭೂಷಣ್ ಯಾದವ್ ಬಂಧನ ಪ್ರಕರಣ
ಹೊಸದಿಲ್ಲಿ, ಮಾ.30: ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಯಾದವ್‌ರನ್ನು ಸಂಪರ್ಕಿಸಲು ತನ್ನ ರಾಜತಾಂತ್ರಿಕರಿಗೆ ಅವಕಾಶ ನೀಡದಿರುವುದಕ್ಕಾಗಿ ಭಾರತವು ಬುಧವಾರ ಪಾಕಿಸ್ತಾನವನ್ನು ಖಂಡಿಸಿದೆ. ಬಂಧಿತ ಕುಲಭೂಷಣ್‌ಯಾದವ್ ಭಾರತೀಯ ಗೂಢಚಾರಿಯಾಗಿದ್ದು ಆತ ಪಾಕ್ ನೆಲದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದರೆಂದು ಪಾಕ್ ಆರೋಪಿಸಿದೆ.
ತಾನು ಭಾರತದ ಬೇಹುಗಾರಿಕಾ ಸಂಸ್ಥೆ ‘ರಾ’ ಪರವಾಗಿ ಕೆಲಸ ಮಾಡುತ್ತಿದ್ದು, ಬಲೂಚಿಸ್ತಾನದಲ್ಲಿ ಬಂಡುಕೋರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಕೆಲಸವನ್ನು ತನಗೆ ವಹಿಸಲಾಗಿತ್ತೆಂದು ಕುಲಭೂಷಣ್ ತಪ್ಪೊಪ್ಪಿಗೆಯ ವೀಡಿಯೊವನ್ನು ಪಾಕ್ ಮಂಗಳವಾರ ಬಿಡುಗಡೆಗೊಳಿಸಿತ್ತು. ಆದರೆ ವೀಡಿಯೊದಲ್ಲಿನ ಅಂಶಗನ್ನು ಭಾರತ ತಳ್ಳಿಹಾಕಿದೆ. .ಯಾದವ್ ಇರಾನ್‌ನಲ್ಲಿ ಸಣ್ಣ ನೌಕೋದ್ಯಮವನ್ನು ನಡೆಸುತ್ತಿದ್ದು, ಅವರನ್ನು ನೆರೆಯ ರಾಷ್ಟ್ರವಾದ ಪಾಕಿಸ್ತಾನವು ಅಪಹರಿಸಿರುವ ಸಾಧ್ಯತೆಯಿದೆಯೆಂದು ಭಾರತ ಸರಕಾರ ಆಪಾದಿಸಿದೆ. ಪಾಕ್ ಬಿಡುಗಡೆಗೊಳಿಸಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯ ವೀಡಿಯೊವನ್ನು ನಾವು ವೀಕ್ಷಿಸಿದ್ದೇವೆ. ವೈಯಕ್ತಿಕವಾದ ಹೇಳಿಕೆಗಳನ್ನು ಹೊಂದಿರುವ ಈ ವಿಡಿಯೋ ವಾಸ್ತವಿಕವಾಗಿ ಆಧಾರರಹಿತವಾದುದಾಗಿದೆ’’ ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಭಾರತದ ಮನವಿಯ ಹೊರತಾಗಿಯೂ ಬಂಧಿತ ಕುಲಭೂಷಣ್ ಯಾದವ್‌ರನ್ನು ಭಾರತೀಯ ದೂತಾವಾಸದ ಮೂಲಕ ಸಂಪರ್ಕಿಸಲು ನಮಗೆ ಅವಕಾಶ ನೀಡಲಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಅವರ ಕ್ಷೇಮದ ಬಗ್ಗೆ ನಮ್ಮಲ್ಲಿ ಆತಂಕವುಂಟಾಗಿದೆ’’ ಎಂದು ಅವರು ತಿಳಿಸಿದ್ದಾರೆ.





