ಆಸ್ಟ್ರೇಲಿಯ ಪ್ರವಾಸದ ಹಿಂದೆ ಅದಾನಿ ಹಿತಾಸಕ್ತಿಯಿಲ್ಲ: ಜೇಟ್ಲಿ

ಸಿಡ್ನಿ, ಮಾ. 30: ಆಸ್ಟ್ರೇಲಿಯದ ತನ್ನ ಭೇಟಿಯ ವೇಳೆ, ಅದಾನಿಯ 16.5 ಬಿಲಿಯ ಡಾಲರ್ (ಸುಮಾರು 1.1 ಲಕ್ಷ ಕೋಟಿ ರೂಪಾಯಿ) ವೆಚ್ಚದ ಕಲ್ಲಿದ್ದಲು ಗಣಿ ಯೋಜನೆಯ ನಿಧಿ ಸಂಗ್ರಹಕ್ಕೆ ಒತ್ತು ನೀಡಲಿದ್ದೇನೆ ಎಂಬ ವರದಿಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ತಳ್ಳಿಹಾಕಿದ್ದಾರೆ.
ಅದಾನಿಯ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಕಾರ್ಮಿಕೇಲ್ ಕಲ್ಲಿದ್ದಲು ಗಣಿ ಯೋಜನೆಯ ಬಗ್ಗೆ ನಿಮ್ಮ ಭೇಟಿಯ ವೇಳೆ ಆಸ್ಟ್ರೇಲಿಯ ನಾಯಕರೊಂದಿಗೆ ಮಾತುಕತೆ ನಡೆಸುವಿರೇ ಎಂಬ ಪ್ರಶ್ನೆಗೆ, ‘‘ಇಲ್ಲ’’ ಎಂದು ಜೇಟ್ಲಿ ಉತ್ತರಿಸಿದರು.‘‘ಇದು ಆಸ್ಟ್ರೇಲಿಯದ ಆಂತರಿಕ ವ್ಯವಹಾರ. ನನ್ನ ಆಸ್ಟ್ರೇಲಿಯ ಭೇಟಿಯ ಉದ್ದೇಶ ಇದಲ್ಲ’’ ಎಂದು ಅವರು ನುಡಿದರು. ಅದಾನಿಯ ವಿವಾದಗಳಿಂದ ಸುತ್ತುವರಿದಿರುವ ಯೋಜನೆಗೆ ಸುಲಭ ಹಣಕಾಸು ಹೊಂದಿಸಲು ಜೇಟ್ಲಿ ಪ್ರಯತ್ನಿಸುವ ಸಾಧ್ಯತೆಗಳಿವೆ ಎಂಬುದಾಗಿ ಈ ಹಿಂದೆ ಮಾಧ್ಯಮಗಳು ವರದಿ ಮಾಡಿದ್ದವು.
ಜೇಟ್ಲಿ ಆಸ್ಟ್ರೇಲಿಯದ ವೆಲ್ತ್ ಫಂಡ್ ‘ಫ್ಯೂಚರ್ ಫಂಡ್’ನ ಮುಖ್ಯಸ್ಥ ಪೀಟರ್ ಕೋಸ್ಟಲೊರನ್ನು ಭೇಟಿಯಾಗುವಾಗ ಅದಾನಿಯ ಯೋಜನೆಯ ಬಗ್ಗೆ ಪ್ರಸ್ತಾಪಿಸಬಹುದು ಎಂಬುದಾಗಿ ವರದಿಗಳು ಹೇಳಿದ್ದವು.





