ನಮ್ಮ ವೇಷಭೂಷಣ ನೋಡಿಯೇ ನಮಗೆ ಥಳಿಸಿದರು
"ಜೈ ಮಾತಾಕಿ" ಹೇಳಲು ನಿರಾಕರಿಸಿ ಹಲ್ಲೆಗೊಳಗಾದ ಮದ್ರಸ ವಿದ್ಯಾರ್ಥಿ

ಹೊಸದಿಲ್ಲಿ , ಮಾ. 31: " ನಮ್ಮ ವೇಷಭೂಷಣ ನೋಡಿಯೇ ಅವರು ನಮ್ಮನ್ನು ಗುರಿ ಮಾಡಿದರು" ಇದು " ಜೈ ಮಾತಾಕಿ " ಎಂದು ಹೇಳಲು ನಿರಾಕರಿಸಿದ್ದಕ್ಕೆ ಶನಿವಾರ ಗುಂಪೊಂದರಿಂದ ಹಲ್ಲೆಗೊಳಗಾದ ಮೂವರ ಪೈಕಿ ಮೊಹಮ್ಮದ್ ದಿಲ್ಕಶ್ ಅವರ ಮಾತು. ದೆಹಲಿಯ ಹೊರವಲಯದ ಬೇಗಮ್ಪುರ್ ನಲ್ಲಿ ಮದ್ರಸವೊಂದರ ಮೂವರು ವಿದ್ಯಾರ್ಥಿಗಳು ದಿಲ್ಕಶ್ , ಮೊಹಮ್ಮದ್ ಅಜ್ಮಲ್ ಹಾಗು ಮೊಹಮ್ಮದ್ ನಯೀಮ್ ಅವರ ಮೇಲೆ ಐದು ಮಂದಿಯ ತಂಡವೊಂದು ಹಲ್ಲೆ ನಡೆಸಿತ್ತು.
ಸಮೀಪದ ಪಾರ್ಕ್ ಒಂದರಲ್ಲಿ ನಡೆದುಕೊಂಡು ಹೋಗುತ್ತಿರುವಾಗ ೫ -೬ ಮಂದಿಯ ತಂಡ ಬಂದು ಅಜ್ಮಲ್ ಕಪಾಳಕ್ಕೆ ಬಾರಿಸಿ " ಜೈ ಮಾತಾಕಿ " ಎಂದು ಕೂಗದಿದ್ದರೆ ಕೊಂದು ಹಾಕುವುದಾಗಿ ಬೆದರಿಕೆ ಹಾಕಿತು ಎಂದು ದಿಲ್ಕಶ್ ಹೇಳಿದ್ದಾನೆ. " ಅದೇ ದಿನ ಬೆಳಗ್ಗೆ ಜನರಿಗೆ ಘೋಷಣೆ ಕೂಗಲು ಬಲವಂತ ಪಡಿಸುವ ಕುರಿತು ಪತ್ರಿಕೆಯಲ್ಲಿ ಓದಿದ್ದೆ. ಆದರೆ ಅದು ನನಗೇ ಆಗುತ್ತೆ ಎಂದು ಯೋಚಿಸಿಯೇ ಇರಲಿಲ್ಲ. ಅದೇ ದಿನ ಸಂಜೆ ನನಗೆ ಹಾಗು ನನ್ನ ಸ್ನೇಹಿತರಿಗೆ ಹೀಗಾಯಿತು " ಎಂದು ದಿಲ್ಕಶ್ ಹೇಳಿದ್ದಾನೆ.
" ನಾವಿನ್ನೂ ಯಾವುದೇ ಪ್ರತಿಕ್ರಿಯೆ ನೀಡುವ ಮೊದಲೇ ಅವರು ನಮ್ಮ ಟೋಪಿ ತೆಗೆದು ನೆಲಕ್ಕೆ ಬಿಸಾಡಿದರು. ನಂತರ ನಮಗೆ ಹೊಡೆಯಲು ಪ್ರಾರಂಭಿಸಿದರು. ಅವರು ನಿರ್ದಯವಾಗಿ ನಮ್ಮನ್ನು ಥಳಿಸಿದರು. ಹೇಗೋ ನಾವು ಅಲ್ಲಿಂದ ಓಡಿ ತಪ್ಪಿಸಿಕೊಂಡು ಪಾರ್ಕ್ ನ ಹೊರಗೆ ಬಂದು ನಮ್ಮ ಶಿಕ್ಷಕ ಮೊಹಮ್ಮದ್ ಅಝರ್ ರನ್ನು ಕರೆದೆವು. ಅವರು ನಮ್ಮ ಮುಖ್ಯಸ್ಥರನ್ನು ಕರೆದು ಬಳಿಕ ಪೊಲೀಸರಿಗೆ ತಿಳಿಸಿದೆವು . ಸ್ವಲ್ಪ ಸಮಯದ ಬಳಿಕ ಬಂದ ಪೊಲೀಸರು ನಮ್ಮನ್ನು ಸಂಜಯ್ ಗಾಂಧೀ ಆಸ್ಪತ್ರೆಗೆ ಕರೆದುಕೊಂಡು ಹೋದರು " ಎಂದು ದಿಲ್ಕಶ್ ಎಫ್ ಐ ಆರ್ ನಲ್ಲಿ ಹೇಳಿದ್ದಾನೆ.
ಪೊಲೀಸರು ಬಿಸಿ ಇದ್ದೀವೆಂದು ಹೇಳಿ ಎಫ್ ಐ ಆರ್ ದಾಖಲಿಸಲು ಮೂರು ದಿನ ತೆಗೆದುಕೊಂಡರು. ಅದರಲ್ಲೂ ಟೋಪಿ ಬಿಸಾಡಿದ ವಿಷಯ ಬರೆಯಲು ನಿರಾಕರಿಸಿದರು ಎಂದು ಮದ್ರಸದ ಇತರರು ದೂರಿದರು.
photo courtesy : hindustantimes.com







