ಉತ್ತರ ಪ್ರದೇಶ : 73 ಸಂಸದರಿರುವ ಬಿಜೆಪಿಗೆ ಈಗ 73 ಶಾಸಕರು ಸಿಗುವುದಿಲ್ಲವೆಂಬ ಭಯ?

ಲಕ್ನೌ : ಉತ್ತರ ಪ್ರದೇಶದಲ್ಲಿ ಒಟ್ಟು 73 ಲೋಕಸಭಾ ಸದಸ್ಯರನ್ನು ಹೊಂದಿರುವ ಬಿಜೆಪಿಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ಅಷ್ಟೇ ಸಂಖ್ಯೆಯ ಕ್ಷೇತ್ರಗಳಲ್ಲಿ ವಿಜಯ ಸಾಧಿಸಲು ಕಷ್ಟ ಪಡುವುದೇ, ಅದು ಕೂಡ ಉತ್ತರ ಪ್ರದೇಶದಲ್ಲಿ ಆ ಸಂಖ್ಯೆಗಿಂತ ಐದು ಪಟ್ಟಿಗಿಂತಲೂ ಹೆಚ್ಚು ಅಸೆಂಬ್ಲಿ ಸೀಟುಗಳಿರುವಾಗ ! ಆದರೂ ಇಂತಹ ಒಂದು ಜೋಕು ರಾಜ್ಯದಲ್ಲಿಹರಡುತ್ತಿದೆ, ಎಂದು ಕ್ಯಾಚ್ ನ್ಯೂಸ್‌ನ ಪಣಿಣಿ ಆನಂದ್ ಅವರ ವರದಿಯೊಂದು ತಿಳಿಸುತ್ತದೆ.
ಆಶ್ಚರ್ಯವೆಂದರೆಇಂತಹ ಒಂದು ಸುದ್ದಿಯನ್ನು ಬಿಜೆಪಿ ಬೆಂಬಲಿಗರೂ ನಿರಾಕರಿಸುತ್ತಿಲ್ಲ. ಬದಲಾಗಿ ಕೇಂದ್ರ ನಾಯಕತ್ವದಅನಾಸ್ಥೆ ಹಾಗೂ ನಿರ್ಧಾರ ಕೈಗೊಳ್ಳುವಲ್ಲಿ ಆಗುತ್ತಿರುವ ವಿಳಂಬವು ರಾಜ್ಯದಲ್ಲಿ ಪಕ್ಷದ ಸಂಕಟಗಳಿಗೆ ಕಾರಣವೆಂದು ಅವರು ಹೇಳುತ್ತಾರೆ.
ರಾಜ್ಯದಲ್ಲಿ ಬಿಜೆಪಿಯ ಸ್ಥಿತಿ ನಿರಾಶಾದಾಯಕವಾಗಿದೆ. ಚುನಾವಣೆಗಳು ಬರುವ ವರ್ಷ ನಡೆಯಲಿದೆಯಾದರೂ ಪಕ್ಷ ಇನ್ನೂ ಸಂಘಟಿತವಾಗಿಲ್ಲ. ಕಳೆದ ಲೋಕಸಭಾ ಚುನಾವಣೆಯ ಮುನ್ನ ಉತ್ತರ ಪ್ರದೇಶದ ಪಕ್ಷ ವ್ಯವಹಾರಗಳ ಉಸ್ತುವಾರಿಯಾಗಿದ್ದ ಅಮಿತ್ ಶಾ ನೇತೃತ್ವದಲ್ಲಿ ಪಕ್ಷ 80ರಲ್ಲಿ 73 ಲೋಕಸಭಾ ಸ್ಥಾನಗಳನ್ನು ಪಡೆದು ಜಯಭೇರಿಬಾರಿಸಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಇದಕ್ಕೆ ಬಹುಮಾನವೆಂಬಂತೆ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಕಳೆದ ಕೆಲವು ತಿಂಗಳಗಳಿಂದೀಚೆಗೆ ಪಕ್ಷದಲ್ಲಿ ಆಂತರಿಕ ಕಲಹಗಳು ಹಾಗೂ ಭಿನ್ನಾಭಿಪ್ರಾಯಗಳು ತಾರಕಕ್ಕೇರಿವೆ. ಮುಂದಿನ ರಾಜ್ಯ ಬಿಜೆಪಿ ಅಧ್ಯಕ್ಷ ಯಾರಾಗಬಹುದೆಂಬುದರ ಬಗ್ಗೆಯೂ ಒಮ್ಮತವಿಲ್ಲ. ಸಂಸದರೂ ಪಕ್ಷದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಒಂದೂವರೆ ವರ್ಷಗಳ ಹಿಂದೆ ಮೋದಿ ವರ್ಚಸ್ಸಿನಿಂದ ತೀವ್ರ ಪ್ರಭಾವಿತರಾಗಿದ್ದ ಪಕ್ಷ ಕಾರ್ಯಕರ್ತರು ಈಗ ಮೌನವಾಗಿ ಬಿಟ್ಟಿದ್ದಾರೆ. ಬಿಜೆಪಿಗೆ ನಾಯಕರ ಕೊರತೆಯಿಲ್ಲದಿದ್ದರೂ ಒಮ್ಮತದ ಕೊರತೆಯಿದೆ.
ಇದಕ್ಕೆ ತದ್ವಿರುದ್ಧವಾಗಿ ಸಮಾಜವಾದಿ ಪಕ್ಷ ಈಗಾಗಲೇ 143 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಎಸ್‌ಪಿ ಕೂಡ ಶೇ. 75ರಷ್ಟು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆಯೆಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ಕೂಡ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ರಾಜ್ಯದಲ್ಲಿಅಧಿಕಾರ ಪಡೆಯಲೇ ಬೇಕೆಂಬ ಹಟದಲ್ಲಿರುವ ಪಕ್ಷ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ನೇಮಿಸಿದೆ. ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ರಾಜ್ಯದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಬಿಜೆಪಿ ರಾಜ್ಯದಲ್ಲಿಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆಯೆಂದು ಅರಿತಿರುವ ಅಮಿತ್ ಶಾ ತಮ್ಮ ಗಮನವನ್ನು ಬೇರೆ ರಾಜ್ಯಗಳಿಗೆ ಕೇಂದ್ರೀಕರಿಸಿದ್ದಾರೆ. ಇದೇ ಕಾರಣಕ್ಕೆ ಹಿರಿಯ ಸಂಘ ಪರಿವಾರ ನಾಯಕ ದತ್ತಾತ್ರೇಯ ಹೊಸಬಾಳೆಯವರನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗಿದೆ. ಆದರೂ ಬಿಜೆಪಿ ನಾಯಕರು ತಳ ಮಟ್ಟದ ಪರಿಸ್ಥಿತಿಯನ್ನು ಅರಿಯಲು ವಿಫಲರಾಗಿದ್ದಾರೆ. ಬರ ಪರಿಸ್ಥಿತಿಯನ್ನು ತಮ್ಮ ಟಿಂಟೆಡ್ ಗ್ಲಾಸುಗಳ ಮುಖಾಂತರ ಸಮೃದ್ಧ ಸ್ಥಿತಿಯೆಂದು ಅವರು ತಪ್ಪಾಗಿ ಗ್ರಹಿಸುತ್ತಿದ್ದಾರೆ.







