ಶತಮಾನೋತ್ಸವ ಸಂಭ್ರಮದಲ್ಲಿ ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಬ್ಯಾಂಕ್
8 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಮೂಡುಬಿದಿರೆ: ಶತಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಮೂಡುಬಿದಿರೆಯ ಕೋ- ಆಪರೇಟಿವ್ ಸರ್ವಿಸ್ ಬ್ಯಾಂಕ್ ಎಪ್ರಿಲ್ 2ರಿಂದ 9ರವರೆಗೆ 8 ದಿನಗಳ ಕಾಲ ಪ್ರತೀ ದಿನ ಸಂಜೆ 6ರಿಂದ ಸಹಕಾರ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ನಡೆಸಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ ಅಮರನಾಥ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶತಮಾನೋತ್ಸವದ ಪ್ರಯುಕ್ತ 2011 ಕ್ಕೆ ಭವ್ಯಸೌಧವನ್ನು ನಿರ್ಮಿಸಿದೆ. ಶತಮಾನೋತ್ಸವ ಅಂಗವಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪ್ರತೀ ತಿಂಗಳು ವಿಶೇಷ ಕಾರ್ಯಕ್ರಮಗಳನ್ನು ನಡೆಸಿದೆ. ನವಂಬರ್ 9ರಂದು ಶತಮಾನೋತ್ಸವ ಸಮಾರಂಭ ನಡೆಯಲಿದ್ದು ಭವ್ಯ ಮೆರವಣಿಗೆ ನಡೆಯಲಿದೆ. ಬ್ಯಾಂಕಿನ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ 9 ಮಂದಿ ಮಾಜಿ ಅಧ್ಯಕ್ಷರುಗಳ ಭಾವಚಿತ್ರಗಳನ್ನು ಅನಾವರಣಗೊಳಿಸಲಾಗುವುದು. ಹಾಗೂ ಬ್ಯಾಂಕಿನ ನೂತನ ಹವಾನಿಯಂತ್ರಿತ ಕೊಠಡಿಯ ಉದ್ಘಾಟನೆ ನಡೆಯಲಿದೆ ಎಂದು ಅವರು ತಿಳಿಸಿದರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಬ್ಯಾಂಕಿನಲ್ಲಿ ಕೈಗೊಂಡ ವಿವಿಧ ಯೋಜನೆಗಳ ಮಾಹಿತಿ ನೀಡಿದರು.
ಸಹಕಾರ ಚಿಂತನ ಕಾರ್ಯಕ್ರಮದಲ್ಲಿ ಎ.2ರಂದು ಕಾನೂನು ಮತ್ತು ಸಹಕಾರ ವಿಷಯದ ಕುರಿತು ವಕೀಲ ಎಂ. ಕೆ ವಿಜಯ ಕುಮಾರ್ ಮಾತನಾಡಲಿದ್ದಾರೆ. ಬ್ಯಾಂಕಿನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಉದ್ಘಾಟಿಸಲಿದ್ದಾರೆ. ಚೌಟರ ಅರಮನೆಯ ಕುಲದೀಪ ಎಂ. ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಕಾಶ್ ಮಹಾದೇವನ್ ಮಂಗಳೂರು ಇವರಿಂದ "ಕರೋಕೆ ಗಾನ ಮಾಧುರ್ಯ ನಡೆಯಲಿದೆ. ಎ.3ರಂದು ಆಧ್ಯಾತ್ಮದಲ್ಲಿ ಸಹಕಾರ ಎಂಬ ವಿಷಯದ ಕುರಿತು ಚಿಂತನೆ ನಡೆಯಲಿದ್ದು ಜೈನ್ ಹೈಸ್ಕೂಲ್ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಳ ಮಾತನಾಡಲಿದ್ದಾರೆ. ವೆಂಕಟರಮಣ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಉಮೇಶ್ ಪೈ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಪ್ರಶಸ್ತಿ ಪುರಸ್ಕೃತ ಭಾಸ್ಕರ ಕೊಗ್ಗ ಕಾಮತ್ ಇವರಿಂದ ‘ಚೂಡಾಮಣಿ ಲಂಕಾದಹನ’ ಗೊಂಬೆಯಾಟ ನಡೆಯಲಿದೆ. ಎ.4ರಂದು ಮಾಧ್ಯಮದಲ್ಲಿ ಸಹಕಾರ ಎಂಬ ವಿಷಯದ ಕುರಿತು ಆಳ್ವಾಸ್ ಕಾಲೇಜಿನ ಪತ್ರಿಕೋಧ್ಯಮ ವಿಬಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನ್ ಮಾತನಾಡಲಿದ್ದಾರೆ. ಉದ್ಯಮಿ ಅರುಣ್ ಮೆಂಡಿಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಿಂಗಾರ ಕಲಾ ತಂಡ ಮೂಡುಬಿದಿರೆ ಇವರಿಂದ ಹಾಸ್ಯ ರಸ ಸಂಜೆ ಹಾಗೂ ವೈವಿಧ್ಯ ನೃತ್ಯ ಕಾರ್ಯಕ್ರಮ ನಡೆಯಲಿದೆ. ಎ. 5ರಂದು ಇತಿಹಾಸದಲ್ಲಿ ಸಹಕಾರ ವಿಷಯದ ಕುರಿತು ಇತಿಹಾಸ ತಜ್ಞ ಡಾ. ಪುಂಡಿಕಾ ಗಣಪಯ್ಯ ಭಟ್ ಮಾತನಾಡಲಿದ್ದಾರೆ. ಉದ್ಯಮಿ ಅಬುಲ್ ಆಲ ಪುತ್ತಿಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ಕಲಾವಿದರ ಕೂಡುವಿಕೆಯಿಂದ ‘ಶ್ರೀ ರಾಮ ದರ್ಶನ’ ತಾಳಮದ್ದಲೆ ನಡೆಯಲಿದೆ. ಎ. 6ರಂದು ಯುವಜನತೆ ಮತ್ತು ಸಹಕಾರ ಎಂಬ ವಿಷಯದಲ್ಲಿ ನಿವೃತ್ತ ಅಧ್ಯಾಪಕ ಗೋಪಾಲ್ ಮಾತನಾಡಲಿದ್ದಾರೆ. ಮೂಡುಬಿದರೆ ವಲಯದ ಮುಖ್ಯ ಧರ್ಮ ಗುರು ರೆ.ಫಾ ಆಸ್ಟಿನ್ ಪೆರಿಸ್ ಅಧ್ಯಕ್ಷತೆ ವಹಿಸಲಿದ್ದಾರೆ. ದೀಪ್ತಿ ಬಾಲಕೃಷ್ಣ ಇವರಿಂದ ‘ಭಕ್ತಿ ಭಾವ ಸಂಗಮ’ ನಡೆಯಲಿದೆ. ಎ. 7ರಂದು ಸಮಾಜ ಮತ್ತು ಸಹಕಾರ ಎಂಬ ವಿಷಯದ ಕುರಿತು ಸಹಕಾರ ತರಬೇತಿ ಕೇಂದ್ರದ ಪ್ರಾಂಶುಪಾಲ ಎಂ.ಎಂ ಶ್ಯಾಮಲಾ ಮಾತನಾಡಲಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿದುಶಿ ವಿದ್ಯಾ ಮನೋಜ್ ಇವರಿಂದ ‘ನೃತ್ಯ’ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ. ಎ. 9ರಂದು ಸಮಾರೋಪ ನಡೆಯಲಿದ್ದು ಕೃಷ್ಣೇ ಗೌಡ ಮತ್ತು ಬಳಗ ಮೈಸೂರು ಇವರಿಂದ ಮಾತಿನ ಹಾಸ್ಯ ಸಿಂಚನ ಹಾಗೂ ವಿಜಯ ಕುಮಾರ್ ಕೋಡಿಯಾಲ್ ಬೈಲ್ ಇವರಿಂದ ತುಳು ಹಾಸ್ಯಮಯ ನಾಟಕ ನಡೆಯಲಿದೆ ಎಂದರು. ಬ್ಯಾಂಕಿನ ನಿರ್ದೇಶಕರಾದ ಗಣೇಶ್ ನಾಯಕ್, ಎಂ. ಪದ್ಮನಾಭ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







