ಪ್ರಶ್ನೆ ಪತ್ರಿಕೆ ಸೋರಿಕೆ: ಶಿಕ್ಷಣ ಸಚಿವರು ರಾಜೀನಾಮೆ ನೀಡಲಿ - ಪೂಜಾರಿ

ಮಂಗಳೂರು, ಮಾ. 31: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯಕ್ಕೆ ಸಂಬಂಧಿಸಿ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 21ರಂದು ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ 40 ಮಂದಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಪ್ರಕರಣದಲ್ಲಿ ಅಧಿಕಾರಿಗಳಿಗೆ ಅಮಾನತು ಮಾಡಿದರೆ ಸಾಕೇ? ಸಚಿವರಿಗೆ ಜವಾಬ್ದಾರಿ ಬೇಡವೇ? ಸಚಿವರು ಅಧಿಕಾರಕ್ಕೆ ಅಂಟಿಕೊಳ್ಳದೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ. ರಾಜೀನಾಮೆ ಕೊಡಲು ನಿರಾಕರಿಸಿದರೆ ಮುಖ್ಯಮಂತ್ರಿಯವರು ಅವರನ್ನು ಸಂಪುಟದಿಂದ ಉಚ್ಛಾಟನೆ ಮಾಡಲಿ ಎಂದರು.
ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಕೇವಲ ಅಧಿಕಾರಿಗಳ ಅಮಾನತಿನಿಂದ ಏನೂ ಆಗದು. ಕೆಲವು ದಿನಗಳ ಬಳಿಕ ಮತ್ತೆ ಕೆಲಸಕ್ಕೆ ಹಾಜರಾಗುತ್ತಾರೆ. ಇದೊಂದು ಕ್ರಿಮಿನಲ್ ನಿರ್ಲಕ್ಷ್ಯ ಪ್ರಕರಣ. ಸರಕಾರ ಇದನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೂಜಾರಿ ಹೇಳಿದರು.
ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಉಮೇಶ್ವಂದ್ರ, ಟಿ.ಕೆ.ಸುಧೀರ್, ವಿಶ್ವಾಸ್‌ಕುಮಾರ್ ದಾಸ್, ಾರೂಕ್ ಉಳ್ಳಾಲ್, ರಮಾನಂದ ಪೂಜಾರಿ, ಮೋಹನ್ ಮೆಂಡನ್, ಕರುಣಾಕರ ಶೆಟ್ಟಿ, ನೀರಜ್ ಪಾಲ್, ಮನೀಷ್ ಬೋಳಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







