ಎ.1ರಿಂದ ಸುಂಕ ಪಾವತಿಗೆ ಅರ್ಹ ವಸ್ತುಗಳಿಲ್ಲದಿದ್ದರೆ ವಿಮಾನ ಪ್ರಯಾಣಿಕರು ಘೋಷಣಾ ಪತ್ರ ತುಂಬಬೇಕಿಲ್ಲ
ಹೊಸದಿಲ್ಲಿ,ಮಾ.31: ಭಾರತಕ್ಕೆ ಆಗಮಿಸುವ ವಿಮಾನ ಪ್ರಯಾಣಿಕರು ಸುಂಕ ಪಾವತಿಗೆ ಅರ್ಹ ವಸ್ತುಗಳನ್ನು ಹೊಂದಿರದಿದ್ದಲ್ಲಿ ಶುಕ್ರವಾರದಿಂದ ಕಸ್ಟಮ್ಸ್ ಘೋಷಣಾ ನಮೂನೆಯನ್ನು ತುಂಬಬೇಕಾಗಿಲ್ಲ.
ಈ ಮೊದಲು ಭಾರತಕ್ಕೆ ಬಂದಿಳಿಯುವ ಎಲ್ಲ ಪ್ರಯಾಣಿಕರು ಈ ನಮೂನೆಯನ್ನು ಕಡ್ಡಾಯವಾಗಿ ತುಂಬಬೇಕಾಗಿತ್ತು. ಆದರೆ ಶುಕ್ರವಾರದಿಂದ ಜಾರಿಗೆ ಬರುತ್ತಿರುವ ನೂತನ ನಿಯಮಗಳಂತೆ ಇನ್ನು ಮುಂದೆ ನಿಷೇಧಿತ ಮತ್ತು ಸುಂಕಕ್ಕೆ ಅರ್ಹ ಸರಕುಗಳನ್ನು ಹೊಂದಿರುವವರು ಮಾತ್ರ ‘ಭಾರತೀಯ ಕಸ್ಟಮ್ಸ್ ಘೋಷಣಾ ನಮೂನೆ ’ಯನ್ನು ತುಂಬಬೇಕಾಗುತ್ತದೆ. ನೂತನ ಕಸ್ಟಮ್ಸ್ ನಿಯಮಗಳು ಸರಿಯಾಗಿ ಪಾಲನೆಯಾಗುವಂತೆ ನೋಡಿಕೊಳ್ಳಲು ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಕಸ್ಟಮ್ಸ್ ಆಯುಕ್ತ ಸಂಜಯ ಮಂಗಲ್ ಅವರು ಗುರುವಾರ ಇಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸುಂಕಕ್ಕೆ ಅರ್ಹ ಸರಕುಗಳನ್ನು ಹೊಂದಿರುವ ಪ್ರಯಾಣಿಕರಿಗೆ ಕಸ್ಟಮ್ಸ್ ಘೋಷಣಾ ನಮೂನೆಗಳನ್ನು ಒದಗಿಸುವಂತೆ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ತಿಳಿಸಲಾಗಿದೆ. ಪ್ರಯಾಣಿಕರು ವಿಮಾನದಲ್ಲಿಯೇ ಈ ನಮೂನೆಗಳನ್ನು ತುಂಬಬೇಕಾಗುತ್ತದೆ, ಇದರಿಂದಾಗಿ ಅವರು ವಿಮಾನದಿಂದ ಇಳಿದ ಬಳಿಕ ಉದ್ದನೆಯ ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ ಎಂದು ಅವರು ಹೇಳಿದರು.
ಎ.1ರಿಂದ ವಿದೇಶಿಯರ ಡ್ಯೂಟಿ ಫ್ರೀ ಅಲೋವನ್ಸ್‌ನ ಮಿತಿಯನ್ನು ಈಗಿನ 8,000 ರೂ.ನಿಂದ 15,000 ರೂ.ಗೆ ಹೆಚ್ಚಿಸಲಾಗಿದೆ.
ಎರಡು ಲೀ.ಮದ್ಯ ಅಥವಾ ವೈನ್,125 ಸಿಗರೇಟ್‌ಗಳು,50 ಸಿಗಾರ್‌ಗಳು ಮತ್ತು 125 ಗ್ರಾಂ ತಂಬಾಕಿನ ಮೇಲೆ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಸುಂಕ ವಿನಾಯಿತಿ ಮುಂದುವರಿಯಲಿದೆ.
ಚೀನಾದಿಂದ ಆಗಮಿಸುವ ಭಾರತೀಯ ಮೂಲದವರು 6,000 ರೂ.ವರೆಗಿನ ವೌಲ್ಯದ ಸುಂಕ ಮುಕ್ತ ಸರಕುಗಳನ್ನು ತರಬಹುದಾಗಿತ್ತು. ಎ.1ರಿಂದ ಈ ಮಿತಿಯನ್ನು ತೆಗೆದು ಹಾಕಲಾಗಿದೆ. ನೇಪಾಲ,ಭೂತಾನ್ ಮತ್ತು ಮ್ಯಾನ್ಮಾರ್‌ನಿಂದ ಆಗಮಿಸುವ ಪ್ರಯಾಣಿಕರಿಗೆ ಈ ಮಿತಿಯನ್ನು ಈಗಿನ 6,000 ರೂ.ನಿಂದ 15,000 ರೂ.ಗೆ ಹೆಚ್ಚಿಸಲಾಗಿದೆ. ಈ ಮಿತಿಯಲ್ಲಿನ ಏರಿಕೆ ವಿಮಾನ ಪ್ರಯಾಣಿಕರಿಗೆ ಮಾತ್ರ ಸೀಮಿತವಾಗಿದೆ. ಭೂ ಗಡಿಗಳ ಮೂಲಕ ಭಾರತವನ್ನು ಪ್ರವೇಶಿಸುವವರಿಗೆ ಸುಂಕ ವಿನಾಯಿತಿಯ ಯಾವುದೇ ಸೌಲಭ್ಯ ಅನ್ವಯಿಸುವುದಿಲ್ಲ.
ನೇಪಾಲ,ಭೂತಾನ್ ಮತ್ತು ಮ್ಯಾನ್ಮಾರ್‌ಗಳಿಂದ ಆಗಮಿಸುವವರನ್ನು ಹೊರತು ಪಡಿಸಿ ಇತರ ಯಾವುದೇ ದೇಶದಿಂದ ಆಗಮಿಸುವ ಭಾರತೀಯ ಮೂಲದ ವ್ಯಕ್ತಿಗಳು ತರಬಹುದಾದ ನಗದು ಹಣದ ಮಿತಿಯನ್ನು ಸಹ ಹೆಚ್ಚಿಸಲಾಗಿದೆ. ಇಂತಹ ಪ್ರಯಾಣಿಕರು ಎ.1ರಿಂದ ಈಗಿನ 45,000 ರೂ.ಬದಲು 50,000 ರೂ.ವೌಲ್ಯದ ಸುಂಕಮುಕ್ತ ವಸ್ತುಗಳನ್ನು ತರಬಹುದಾಗಿದೆ.





