ಜನರ ಹೆದರಿಕೆಯನ್ನು ‘ನಗದೀಕರಿಸುವ’ ಟ್ರಂಪ್‌ಗೆ ಒಬಾಮ ಖಂಡನೆ

ವಾಶಿಂಗ್ಟನ್, ಮಾ. 31: ಜಗತ್ತಿನಾದ್ಯಂತ ಇತ್ತೀಚೆಗೆ ನಡೆಯುತ್ತಿರುವ ಭಯೋತ್ಪಾದನೆ ದಾಳಿಗಳ ಹಿನ್ನೆಲೆಯಲ್ಲಿ ಭೀತಿ ಹುಟ್ಟಿಸಿ ಜನರನ್ನು ‘‘ವಿಭಜಿಸುವವರ’’ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮತ್ತು ಉಪಾಧ್ಯಕ್ಷ ಜೋ ಬೈಡನ್ ಜನರಿಗೆ ಕರೆ ನೀಡಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಮುಂಚೂಣಿ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್‌ರನ್ನು ಅವರು ಗುರಿಯಾಗಿಸಿ ಈ ಹೇಳಿಕೆ ನೀಡಿರುವಂತೆ ಕಂಡುಬರುತ್ತಿದೆ.
ಭಯೋತ್ಪಾದಕರ ಉದ್ದೇಶ ‘‘ನಮ್ಮ ನಂಬಿಕೆಯನ್ನು ದುರ್ಬಲಗೊಳಿಸುವುದಾಗಿದೆ’’ ಹಾಗೂ ಸಹಾಯ ಮತ್ತು ಆಶ್ರಯದ ಅಗತ್ಯ ಅತ್ಯಂತ ಹೆಚ್ಚಾಗಿ ಬೇಕಾಗಿರುವ ಜನರಿಂದ ಇತರರನ್ನು ದೂರ ಮಾಡುವುದಾಗಿದೆ ಎಂದು ಒಬಾಮ ನುಡಿದರು.
‘‘ಈ ದಾಳಿಗಳು ಭಯ ಮತ್ತು ವಿಭಜನೆಯನ್ನು ಹುಟ್ಟು ಹಾಕಬಹುದಾಗಿದೆ. ಅಪರಿಚಿತರನ್ನು ಹೊರಹಾಕಲು, ನಮ್ಮಂತೆ ಕಾಣದಿರುವವರ ಮೇಲೆ ದಾಳಿ ನಡೆಸಲು ಅಥವಾ ನಾವೀಗ ಮಾಡುತ್ತಿರುವಂತೆ ಪ್ರಾರ್ಥಿಸಲು ನಮ್ಮನ್ನು ಪ್ರೇರೇಪಿಸಬಹುದಾಗಿದೆ. ಅದೇ ವೇಳೆ, ಸಹಾಯ ಮತ್ತು ಆಶ್ರಯ ಅತ್ಯಂತ ಹೆಚ್ಚು ಬೇಕಾಗಿರುವ ಜನರಿಗೆ ಬೆನ್ನು ತಿರುಗಿಸಲು ನಮಗೆ ಪ್ರಚೋದನೆ ನೀಡಬಹುದಾಗಿದೆ’’ ಎಂದರು.
‘‘ಭಯೋತ್ಪಾದಕರ ಉದ್ದೇಶವೂ ಅದೇ. ನಮ್ಮ ನಂಬಿಕೆಯನ್ನು ದುರ್ಬಲಗೊಳಿಸುವುದು, ನಮ್ಮ ಶ್ರೇಷ್ಠ ಭಾವನೆಗಳನ್ನು ದುರ್ಬಲಗೊಳಿಸುವುದು ಹಾಗೂ ನಮ್ಮಲ್ಲಿರುವ ಒಳ್ಳೆಯತನವನ್ನು ನಾಶಪಡಿಸಲು ಪ್ರಯತ್ನಿಸುವುದು’’ ಎಂದು ಬುಧವಾರ ನಡೆದ ಈಸ್ಟರ್ ಪ್ರೇಯರ್ ಬ್ರೇಕ್‌ಫಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪಾಧ್ಯಕ್ಷ ಜೋ ಬೈಡನ್ ಮಾತನಾಡಿ, ಬ್ರಸೆಲ್ಸ್, ಟರ್ಕಿ ಮತ್ತು ಪಾಕಿಸ್ತಾನಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ಜನರಲ್ಲಿ ಭಯ ಮೂಡಿರುವುದು ಸಹಜವೇ ಆಗಿದೆ ಎಂದರು. ಆದರೆ, ಈ ಭಯವನ್ನು ಸ್ವಾರ್ಥಕ್ಕಾಗಿ ನಗದೀಕರಿಸುವುದು ಸಾರಾಸಗಟು ಅಸ್ವೀಕಾರಾರ್ಹವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆಗೆ ಶಿಕ್ಷೆಯಾಗಬೇಕು: ಟ್ರಂಪ್
ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆಯರಿಗೆ ಶಿಕ್ಷೆಯಾಗಬೇಕಾಗಿದೆ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.
ಆದಾಗ್ಯೂ, ಶಿಕ್ಷೆ ಏನು ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ.
ವಿಸ್‌ಕೋನ್ಸಿನ್‌ನ ಟೌನ್‌ಹಾಲ್‌ನಲ್ಲಿ ನಡೆದ ಚರ್ಚಾಕೂಟವೊಂದರಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವಿಷಯದಲ್ಲಿ ಡೊನಾಲ್ಡ್ ಮಿತ್ತು ಎಂಎಸ್‌ಎನ್‌ಬಿಸಿಯ ಕ್ರಿಸ್ ಮ್ಯಾಥ್ಯೂಸ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಗರ್ಭಪಾತವನ್ನು ನಿಷೇಧಿಸಬೇಕೆ ಎಂಬ ಮ್ಯಾಥ್ಯೂಸ್‌ರ ಪ್ರಶ್ನೆಗೆ, ‘‘ಅದಕ್ಕೆ ಶಿಕ್ಷೆ ವಿಧಿಸಬೇಕು’’ ಎಂದು ಟ್ರಂಪ್ ಪ್ರತಿಪಾದಿಸಿದರು.
ಗರ್ಭಪಾತವನ್ನು ಸುಪ್ರೀಂ ಕೋರ್ಟ್ ಕಾನೂನುಬದ್ಧಗೊಳಿಸಿದ ಬಳಿಕ ಅಮೆರಿಕದಲ್ಲಿ ಈ ವಿಷಯ ಭಾರೀ ಚರ್ಚೆಯ ವಿಷಯವಾಗಿದೆ.







