ಜನರಲ್ ತಿಮ್ಮಯ್ಯ ಭಾರತ ಕಂಡ ಧೀಮಂತ ಸೇನಾನಿ: ಕುಲ್ವಂತ್ ಸಿಂಗ್ ನಿಜ್ಜಾರ್

ಮಡಿಕೇರಿ, ಮಾ.31: ಭಾರತೀಯ ಸೈನ್ಯ ಮತ್ತು ರಾಜಕಾರಣದ ನಡುವೆ ಸೌಹಾರ್ದಯುತ ಸಂಬಂಧಗಳನ್ನು ಮೂಡಿಸಲು ಪ್ರಯತ್ನಿಸಿದ ಧೀಮಂತ ವ್ಯಕ್ತಿ ಜನರಲ್ ಕೆ.ಎಸ್. ತಿಮ್ಮಯ್ಯ ಎಂದು ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ಜನರಲ್ ಆಫೀಸರ್ಸ್ ಕಮಾಂಡಿಂಗ್ ಮೇಜರ್ ಜನರಲ್ ಕುಲ್ವಂತ್ ಸಿಂಗ್ ನಿಜ್ಜಾರ್ ಬಣ್ಣಿಸಿದ್ದಾರೆ.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಮತ್ತು ಫೀ.ಮಾ.ಕಾಯಪ್ಪ ಮತ್ತು ಜ. ತಿಮ್ಮಯ್ಯ ಫೋರಂನ ಸಂಯುಕ್ತ ಆಶ್ರಯದಲ್ಲಿ ನಗರದ ಸನ್ನಿಸೈಡ್‌ನಲ್ಲಿ ನಡೆದ ವೀರ ಸೇನಾನಿ ಜನರಲ್ ತಿಮ್ಮಯ್ಯರ 110ನೆ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಭಾರತ ಸೇನಾ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿ ಮಾದರಿಯಾಗಿದ್ದಾರೆ. ಇವರು ದೇಶದ ಕಾಶ್ಮೀರದ ವಿವಿಧ ಪ್ರಾಂತಗಳಲ್ಲಿ ಸೇವೆ ಸಲ್ಲಿಸಿ ದೇಶದ ರಕ್ಷಣೆಗೆ ದುಡಿದಿದ್ದಾರೆ. ಇವರು ಅಂದಿನ ದಿನದಲ್ಲಿ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಪಡಿಸಲು ಶ್ರಮಿಸಿದರು. ಭಾರತ-ಪಾಕಿಸ್ತಾನ ಸಂದಿಗ್ಧ ಸಂದರ್ಭದಲ್ಲಿ ಸೇನಾಕ್ಷೇತ್ರದಲ್ಲಿ ಚತುರತೆಯಿಂದ ಕಾರ್ಯನಿರ್ವಹಿಸಿದ್ದರು ಎಂದು ಮೇಜರ್ ಜನರಲ್ ಕೆ.ಎಸ್.ನಿಜ್ಜಾರ್ ಸ್ಮರಿಸಿದರು.
ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಮಾತನಾಡಿ, ದೇಶದ ಸೇನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಧೀರಯೋಧ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ರಕ್ಷಣಾ ಸೇವೆ ಅಪಾರವಾದುದು ಎಂದು ಹೇಳಿದರು. ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆ ಸನ್ನಿಸೈಡ್‌ನಲ್ಲಿ ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ಮಾಣ ಸಂಬಂಧ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಕಾಮಗಾರಿಯನ್ನು ಆರಂಭಿಸಿದೆ. ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆಯನ್ನು ಯಥಾಸ್ಥಿತಿ ಕಾಪಾಡಿಕೊಂಡು ಸ್ಮಾರಕ ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಮಾತನಾಡಿ, ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಚಾಲನೆ ನೀಡಿದ್ದು, ಐದೂವರೆ ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ಭವನ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಸರಕಾರ, ಜಿಲ್ಲಾಡಳಿತ ಮುಂದಾಗಿದೆ ಎಂದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕೆ.ಸಿ.ಸುಬ್ಬಯ್ಯ ಮಾತನಾಡಿ, ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ನಿರ್ಮಾಣಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದು, ಕಾಮಗಾರಿ ಆರಂಭವಾಗಿದೆ. ಸ್ಮಾರಕ ಭವನ ನಿರ್ಮಾಣ ಸಂಬಂಧ ಹೆಚ್ಚಿನ ಅನುದಾನಕ್ಕೆ ಸರಕಾರವನ್ನು ಕೋರಲಾಗಿದೆ ಎಂದು ಅವರು ತಿಳಿಸಿದರು. ನಗರಸಭೆ ಅಧ್ಯಕ್ಷೆ ಶ್ರೀಮತಿ ಬಂಗೇರ, ಅರೆ ಭಾಷೆ ಸಾಹಿತ್ಯ, ಸಂಸ್ಕೃತಿ ಅಕಾಡಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಹಾಗೂ ಮೇಜರ್ ಬಿ.ಎ.ನಂಜಪ್ಪ ಮಾತನಾಡಿದರು. ಛಾಯಾಚಿತ್ರ ಪ್ರದರ್ಶನ
ವೀರ ಸೇಣಾನಿಯ ಜನ್ಮ ದಿನಾಚರಣೆ ಅಂಗವಾಗಿ ನಗರದ ಸನ್ನಿಸೈಡ್‌ನಲ್ಲಿ ಜನರಲ್ ತಿಮ್ಮಯ್ಯ ಅವರ ಅಪರೂಪದ ಛಾಯಾಚಿತ್ರ ಪ್ರದರ್ಶನ ನಡೆಯಿತು.
<
ಲೆಫ್ಟ್ಟಿನೆಂಟ್ ಜನರಲ್(ನಿವೃತ್ತ) ಬಿ.ಸಿ.ನಂದ, ಏರ್ ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ, ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಬೆನ್ ಬೆರ್ಹಸನ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಜಿಪಂ ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಜಿಪಂ ಮುಖ್ಯ ಯೋಜನಾಧಿಕಾರಿ ತಾಕತ್‌ರಾವ್, ತಹಶೀಲ್ದಾರ್ ಕುಂಞಮ್ಮ, ಡಿವೈಎಸ್ಪಿ ರಾಜಶೇಖರ್, ಉಳ್ಳಿಯಡ ಎಂ.ಪೂವಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮೊವೇರ ಶಂಭು ಸುಬ್ಬಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್, ಮಾಜಿ ಸೈನಿಕರು, ಎನ್.ಸಿ.ಸಿ. ವಿದ್ಯಾರ್ಥಿಗಳು, ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. ಸ್ಪರ್ಧಾ ವಿಜೇತರು: ಜನರಲ್ ತಿಮ್ಮಯ್ಯ ಜೀವನ ಸಾಧನೆ ಕುರಿತು ಭಾಷಣ ಸ್ಪರ್ಧೆಯಲ್ಲಿ ಮೂರ್ನಾಡು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಕಲ್ಪನಾ, ವಿದ್ಯಾರ್ಥಿನಿ ಆರತಿ, ಹಿರಿಯರಾದ ಭಗೀರಥಿ ಹುಲಿತಾಳ ಅವರು ಭಾಗವಹಿಸಿ, ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಜನರಲ್ ತಿಮ್ಮಯ್ಯ ಅವರ ಜೀವನ ಸಾಧನೆ ಕುರಿತು ಮಾತನಾಡಿದರು.







