ಸುಳ್ಯ: ಸ್ಕಾರ್ಫ್ ವಿವಾದ - ವಿದ್ಯಾರ್ಥಿಗಳಿಂದ ಪ್ರತಿಭಟನೆ, ಮಾತುಕತೆಯಲ್ಲಿ ಇತ್ಯರ್ಥ

ಸುಳ್ಯ: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಫೋಟೋ ಸೆಶನ್ ವೇಳೆ ಸ್ಕಾರ್ಫ್ ಧರಿಸದಂತೆ ಹೇಳಿದ ವಿಚಾರ ವಿವಾದಕ್ಕೆ ಕಾರಣವಾಗಿ ಕ್ಯಾಂಪಸ್ ಫ್ರಂಟ್ ಘಟಕದ ವಿದ್ಯಾರ್ಥಿಗಳು ಪ್ರತಿಭಟಿಸಿದ ಘಟನೆ ನಡೆದಿದೆ.
ಶೈಕ್ಷಣಿಕ ವರ್ಷದ ಕೊನೆಯಲ್ಲಿ ವಿದ್ಯಾರ್ಥಿಗಳ ಗ್ರೂಫ್ ಫೋಟೋ ತೆಗೆಯುವ ಕಾರ್ಯಕ್ರಮ ಗುರುವಾರ ಹಮ್ಮಿಕೊಳ್ಳಲಾಗಿತ್ತು. ತರಗತಿವಾರು ಫೋಟೋ, ಎನ್‌ಎಸ್‌ಎಸ್, ಎನ್‌ಸಿಸಿ ಘಟಕಗಳ ಫೋಟೋ ತೆಗೆಯಲಾಯಿತು. ರೆಡ್‌ಕ್ರಾಸ್ ಯುವ ಘಟಕದ ಫೋಟೋ ತೆಗೆಯುವ ಸಂದರ್ಭ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸದಂತೆ ಕಾರ್ಯಕ್ರಮಾಧಿಕಾರಿ ಡಾ.ಅನುರಾಧಾ ಕುರುಂಜಿ ಸೂಚಿಸಿದ್ದರೆಂದೂ, ಸ್ಕಾರ್ಫ್ ತೆಗೆಯದಿದ್ದರೆ ಪ್ರಾಂಶುಪಾಲರಿಗೆ ದೂರು ನೀಡುವುದಾಗಿಯೂ ತಿಳಿಸಿದ್ದರೆನ್ನಲಾಗಿದೆ. ಆದರೆ ವಿದ್ಯಾರ್ಥಿನಿಯರು ಮತ್ತು ಅವರ ಜೊತೆಗಿದ್ದ ಅವರ ಸಮುದಾಯದ ವಿದ್ಯಾರ್ಥಿಗಳು ಸ್ಕಾರ್ಫ್ ತೆಗೆಯುವುದಕ್ಕೆ ನಿರಾಕರಿಸಿದರು ಎನ್ನಲಾಗಿದೆ. ಇದಕ್ಕೂ ಮುನ್ನ ತೆಗೆದ ಎಲ್ಲಾ ಫೋಟೋಗಳಲ್ಲೂ ಹಲವು ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿಯೇ ಫೋಟೋ ತೆಗೆದಿದ್ದು, ಈಗ ಸ್ಕಾರ್ಫ್ ತೆಗೆಸುವುದು ಸರಿಯಲ್ಲ ಎನ್ನುವುದು ಅವರ ವಾದವಾಗಿತ್ತು. ಬಳಿಕ ಗ್ರೂಫ್ ಫೋಟೋ ತೆಗೆಯುವುದನ್ನು ಸ್ಥಗಿತಗೊಳಿಸಲಾಯಿತು. ಈ ವಿಚಾರ ವಿವಾದಕ್ಕೆ ಕಾರಣವಾಗಿ ಗುರುವಾರ ಕ್ಯಾಂಪಸ್ ಫ್ರಂಟ್‌ನ ಸುಳ್ಯ ಘಟಕದ ವಿದ್ಯಾರ್ಥಿಗಳು ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.
ಎಸ್‌ಐ ಚಂದ್ರಶೇಖರ್, ಕ್ಯಾಂಪಸ್‌ನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಜವರೇ ಗೌಡ, ಪ್ರಾಂಶುಪಾಲ ಮೇಜರ್ ಗಿರಿಧರ ಗೌಡ, ಹಾಗೂ ಪ್ರತಿಭಟನೆ ನಿರತ ವಿದ್ಯಾರ್ಥಿಗಳ ಮುಖಂಡರು ಮತ್ತು ಯುವ ರೆಡ್ ಕ್ರಾಸ್ ಘಟಕದ 5 ವಿದ್ಯಾರ್ಥಿನಿಯದ್ದು, ಪ್ರಾಂಶುಪಾಲರ ಚೇಂಬರ್‌ನಲ್ಲಿ ಮಾತುಕತೆ ನಡೆಯಿತು. ಬಳಿಕ ಪ್ರತಿಭಟನಾ ನಿರತರಲ್ಲಿಗೆ ಆಗಮಿಸಿದ ಎಸ್‌ಐ ಹಾಗೂ ಪ್ರಾಂಶುಪಾಲರು ಪ್ರಕರಣ ಸೌಹಾರ್ದಯುವಾಗಿ ಮುಕ್ತಾಯವಾಗಿದೆ ಎಂದರು. ಈ ಸಂದರ್ಭ ಉಪನ್ಯಾಸಕಿ ತಮ್ಮ ಮುಂದೆ ಕ್ಷಮೆ ಕೇಳಬೇಕೆಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು. ಫೋಟೋ ತೆಗೆಯುವ ವೇಳೆ ಸ್ಕಾರ್ಫ್ ತೆಗೆಯಬೇಕೆಂದು ಯಾರೂ ಒತ್ತಾಯ ಮಾಡುವುದಿಲ್ಲ . ಮುಂದೆ ಕಾಲೇಜಿನ ಆಡಳಿತ ಮಂಡಳಿ ಈ ಕುರಿತಂತೆ ತೀರ್ಮಾನ ಕೈಗೊಳ್ಳುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.







