ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ
ಸಚಿವ ಕಿಮ್ಮನೆ ರತ್ನಾಕರ್ ರಾಜೀನಾಮೆಗೆ ಆಗ್ರಹ

ಸೊರಬ,ಮಾ.31: ದ್ವಿತೀಯ ಪಿಯುಸಿ ರಸಾಯ ನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ವಿರೋಧಿಸಿ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿ ಹಿತರಕ್ಷಣಾ ಹೋರಾಟ ಸಮಿತಿ, ಯುವ ಹೋರಾಟ ಸಮಿತಿ ಹಾಗೂ ಪೋಷಕರ ವತಿಯಿಂದ ಗುರುವಾರ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಉಪತಹಶೀಲ್ದಾರ್ ಅಂಬಾಜಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ಸತತ ಎರಡು ಬಾರಿ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ಪಿಯು ಮಂಡಳಿ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಬೇಕು ಹಾಗೂ ಕಣ್ಮುಚ್ಚಿ ಕುಳಿತಿರುವ ಶಿಕ್ಷಣ ಸಚಿವರು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಪೋಷಕ ಮುಹಮ್ಮದ್ ಆರಿಫ್ ಮಾತನಾಡಿ, ಗುರುವಾರ ಬೆಳಗಿನ ಜಾವ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ 3:30ರ ಸುಮಾರಿಗೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಪಿಯು ಮಂಡಳಿ ಹಾಗೂ ಸರಕಾರದ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಆದ್ದರಿಂದ ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಿ ಘಟನೆಯ ಸತ್ಯಾಸತ್ಯತೆಯನ್ನು ಹೊರತರಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಪ್ರಶ್ನೆಪತ್ರಿಕೆಯ ಸೋರಿಕೆಯಲ್ಲಿ ಶಾಮೀಲಾದ ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಯುವ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಭಂಡಾರಿ, ಆಟೊ ಶಿವು, ಆರ್. ಮೂರ್ತಿ, ಪೋಷಕರಾದ ಜಿ. ಕೆರಿಯಪ್ಪ, ರಾಜಪ್ಪ, ಚಂದ್ರಮ್ಮ, ವಿದ್ಯಾರ್ಥಿಗಳಾದ ಪಿ. ಅಭಿಷೇಕ್, ಕೆ. ಪವನ್, ಸಚಿನ್ ಮತ್ತಿತರರು ಪಾಲ್ಗೊಂಡಿದ್ದರು.





