ಸಭಾಪತಿ ಶಿವಮೊಗ್ಗಕ್ಕೆ ತೆರಳಿದ್ದು ಖಾಸಗಿ ಕಾರ್ಯಕ್ರಮಕ್ಕೆ : ಡಿ.ಎಸ್ ಅರುಣ್ ಸ್ಪಷ್ಟನೆ
ಚರ್ಚೆಗೆ ಕಾರಣವಾಗಿದ್ದ ಸಭಾಪತಿ ಕಲಾಪ ನಿರ್ಗಮನ
ಶಿವಮೊಗ್ಗ, ಮಾ. 31: ವಕ್ಫ್ ಆಸ್ತಿ ಕಬಳಿಕೆ ಸಂಬಂಧಿಸಿದ ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆ ವಿಚಾರದಲ್ಲಿ ಸರಕಾರ ಹಾಗೂ ಪ್ರತಿಪಕ್ಷಗಳ ನಡುವೆ ವಿಧಾನಪರಿಷತ್‌ನಲ್ಲಿ ಹಗ್ಗಜಗ್ಗಾಟ ನಡೆಯುತ್ತಿದೆ. ಮತ್ತೊಂದೆಡೆ ವರದಿ ಮಂಡಿಸುವಂತೆ ತಾವು ರೂಲಿಂಗ್ ನೀಡಿದರೂ ಸರಕಾರ ಪರಿಷತ್‌ನಲ್ಲಿ ವರದಿ ಮಂಡನೆ ಮಾಡಿಲ್ಲವೆಂದು ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ಸರಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
nರಾಜ್ಯಪಾಲರು ಕೂಡ ಸರಕಾರಕ್ಕೆ ಸ್ಪಷ್ಟನೆ ಕೋರಿ ಪತ್ರ ಬರೆದಿದ್ದಾರೆ. ಈ ಎಲ್ಲ ವಿದ್ಯಮಾನಗಳ ನಡುವೆ ಬುಧವಾರ ಮಧ್ಯಾಹ್ನ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ವಿಧಾನಪರಿಷತ್ ಕಲಾಪದಿಂದ ಅರ್ಧದಲ್ಲಿ ನಿರ್ಗಮಿಸಿ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹಿಂದಿರುಗಿದ್ದು, ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆ-ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತು. ರೂಲಿಂಗ್ ನೀಡಿದ ಹೊರತಾಗಿಯೂ ಅನ್ವರ್ ಮಾಣಿಪ್ಪಾಡಿ ವರದಿ ಮಂಡಿಸದ ಸರಕಾರದ ನಿಲುವಿನಿಂದ ಬೇಸರಗೊಂಡು ಸಭಾಪತಿಗಳು ಶಿವಮೊಗ್ಗಕ್ಕೆ ಹಿಂದಿರುಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿತ್ತು. ಇದು ವಿಧಾನ ಪರಿಷತ್ ಸದಸ್ಯರ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಮಾಧ್ಯಮಗಳಲ್ಲಿಯೂ ಕೂಡ ನಾನಾ ರೀತಿಯ ವರದಿಗಳು ಪ್ರಕಟವಾಗಿತ್ತು. ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಭಾಪತಿಗಳ ನಿರ್ಗಮನದ ವಿಷಯ ತಿಳಿದು, ಬುಧವಾರ ಮಧ್ಯಾಹ್ನ ಪರಿಷತ್‌ನ ಉಪಸಭಾಪತಿ ಪುಟ್ಟಣ್ಣಯ್ಯರವರೊಂದಿಗೆ ಸಮಾಲೋಚನೆ ನಡೆಸಿದ್ದರು. ಡಿ.ಎಚ್.ಎಸ್.ರವರ ಅನುಪಸ್ಥಿತಿಯ ಕಾರಣದಿಂದ ಉಪ ಸಭಾಪತಿಗಳೇ ವಿಧಾನಪರಿಷತ್ ಕಲಾಪ ಮುಂದುವರಿಸಿದ್ದರು. ಹುರುಳಿಲ್ಲ: ಆದರೆ ಡಿ.ಎಚ್.ಎಸ್.ರವರು ಸರಕಾರದ ವಿರುದ್ಧ ಅಸಮಾಧಾನಗೊಂಡು ಅರ್ಧಕ್ಕೆ ಪರಿಷತ್ ಕಲಾಪದಿಂದ ಶಿವಮೊಗ್ಗಕ್ಕೆ ಹಿಂದಿರುಗಿದ್ದಾರೆಂಬ ಚರ್ಚೆಯಲ್ಲಿ ಯಾವುದೇ ಹುರುಳಿಲ್ಲ. ಇದು ಸತ್ಯಕ್ಕೆ ದೂರವಾದುದಾಗಿದೆ. ಶಿವಮೊಗ್ಗದ ಮನೆಯಲ್ಲಿ ಆಯೋಜಿಸಿರುವ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಉದ್ದೇಶದಿಂದ ಶಿವಮೊಗ್ಗಕ್ಕೆ ಬಂದಿದ್ದಾರೆಯೇ ಹೊರತು, ಸರಕಾರದ ವಿರುದ್ಧ ಬೇಸರಗೊಂಡಿಲ್ಲ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.
n
ಪುತ್ರನ ಸ್ಪಷ್ಟನೆ: ಈ ನಡುವೆ ಡಿ.ಎಚ್.ಎಸ್.ರವರ ಪುತ್ರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರೂ ಆದ ಡಿ.ಎಸ್.ಅರುಣ್‌ರವರು ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದರು. ವಕ್ಫ್ ಆಸ್ತಿ ಕಬಳಿಕೆ ಸಂಬಂಧಿಸಿದ ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆ ಮಾಡದ ಸರಕಾರದ ನಿಲುವಿನಿಂದ ಬೇಸರಗೊಂಡು ಶಿವಮೊಗ್ಗಕ್ಕೆ ತಮ್ಮ ತಂದೆ (ಡಿ.ಎಚ್.ಎಸ್.) ಆಗಮಿಸಿದ್ದಾರೆ ಎಂಬ ನಿಟ್ಟಿನಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಮನೆಯಲ್ಲಿ ಗುರುವಾರ ಹಿರಿಯರೊಬ್ಬರ ವೈದಿಕ ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಲು ತಂದೆ (ಡಿ.ಎಚ್.ಎಸ್.) ಯವರು ಬುಧವಾರ ಮಧ್ಯಾಹ್ನ ಬೆಂಗಳೂರಿನಿಂದ ನಿಗರ್ಮಿಸಿದ್ದರು. ಕುಟುಂಬ ಸದಸ್ಯರೊಂದಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಸಂಜೆ ಮತ್ತೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ ಎಂದು ಡಿ.ಎಸ್.ಅರುಣ್ ಸ್ಪಷ್ಟಪಡಿಸಿದ್ದಾರೆ.







