ಹೆಚ್ಚುವರಿ ಸಹಕಾರಿ ಸಂಘಗಳ ಸ್ಥಾಪನೆಗೆ ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿ ಶಿಫಾರಸು
ಬೆಂಗಳೂರು, ಮಾ.31: ರಾಜ್ಯಾದ್ಯಂತ ಹಲವಾರು ಕಡೆಗಳಲ್ಲಿ 2-3 ಗ್ರಾಮ ಪಂಚಾಯತ್‌ಗಳು ಸೇರಿ ಒಂದೊಂದೆ ಸಹಕಾರ ಸಂಘವಿದ್ದು, ಇದರಿಂದಾಗಿ ಸ್ಥಳೀಯ ಗ್ರಾಮಸ್ಥರು ಸಹಕಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತೊಂದರೆಯಾಗುತ್ತಿದೆ. ಆದುದರಿಂದ, ಪ್ರತಿಯೊಂದು ಗ್ರಾಮ ಪಂಚಾಯತ್‌ನಲ್ಲಿಯೂ ಒಂದು ಪ್ರಾಥಮಿಕ ಸಹಕಾರ ಸಂಘ ಸ್ಥಾಪಿಸಬೇಕು ಎಂದು ರಾಜ್ಯ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಐದು ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಹಾಗೂ ಐದರಿಂದ ಆರು ಸಾವಿರ ಎಕರೆ ವಿಸ್ತೀರ್ಣ ಜಮೀನಿಗಿಂತ ಹೆಚ್ಚಿನ ಭೂಮಿ ಹೊಂದಿರುವ ಕಡೆಗಳಲ್ಲಿ ಹೆಚ್ಚುವರಿಯಾಗಿ ಒಂದು ಸಹಕಾರ ಸಂಘ ಸ್ಥಾಪನೆ ಮಾಡಬೇಕು. ಇದರಿಂದಾಗಿ, ಸದಸ್ಯತ್ವದ ಸಂಖ್ಯೆ ಹೆಚ್ಚಾಗುವುದಲ್ಲದೆ ಎಸ್ಸಿ-ಎಸ್ಟಿ ಜನಾಂಗದವರಿಗೂ ಸಹಕಾರ ಸಂಘಗಳಲ್ಲಿ ಹೆಚ್ಚಿನ ಸದಸ್ಯತ್ವ ದೊರೆಯಲು ಅನುಕೂಲವಾಗುತ್ತದೆ.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂತಹ ಪ್ರದೇಶ, ಗ್ರಾಮಗಳನ್ನು ಗುರುತಿಸಿ ಅವಶ್ಯವಿರುವ ಕಡೆಗಳಲ್ಲಿ ಹೆಚ್ಚುವರಿ ಸಹಕಾರ ಸಂಘಗಳನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆಯ ರಾಜ್ಯ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ತನ್ನ ನಾಲ್ಕನೆ ವರದಿಯಲ್ಲಿ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
ಸಹಕಾರ ಸಂಘಗಳಲ್ಲಿ ಈಗಾಗಲೇ ಹಿಂದುಳಿದ ವರ್ಗದವರಿಗಾಗಿ ಎರಡು ಸ್ಥಾನಗಳನ್ನು ಮೀಸಲಾಗಿರಿಸಲಾಗಿದ್ದು, ಅದೇ ರೀತಿಯಲ್ಲಿ ಸಂಘದ ಸದಸ್ಯರ ಸ್ಥಾನಗಳನ್ನು 11 ರಿಂದ 13ಕ್ಕೆ ಹೆಚ್ಚಿಸಿ ಎಸ್ಸಿ, ಎಸ್ಟಿ ಜನಾಂಗದವರಿಗೆ ತಲಾ ಒಂದೊಂದು ಸ್ಥಾನವನ್ನು ಮೀಸಲಿರಿಸಲು ಸಮಿತಿ ಶಿಫಾರಸು ಮಾಡಿದೆ.
ಸಹಕಾರ ಇಲಾಖೆಯ ವ್ಯಾಪ್ತಿಗೆ ಬರುವ ಪ್ರಾಥಮಿಕ ಹಾಗೂ ಇತರೆ ಎಲ್ಲ ಸ್ವರೂಪದ ಸಹಕಾರ ಸಂಘಗಳಲ್ಲಿಯೂ(ಪ್ರತಿ ಸಹಕಾರ ಘಟಕದಲ್ಲಿಯೂ) ಜನಸಂಖ್ಯೆಗನುಗುಣವಾಗಿ ಎಸ್ಸಿ, ಎಸ್ಟಿ ಜನಾಂಗದವರಿಗೆ ಶೇ.24.1ರಷ್ಟು ಸದಸ್ಯರು ಇರಬೇಕು ಎಂಬ ನಿಯಮ ಜಾರಿಗೆ ತರಬೇಕು ಎಂದು ಶಿಫಾರಸು ಮಾಡಲಾಗಿದೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ: ರಾಜ್ಯದಲ್ಲಿ ಗಣಿ ಚಟುವಟಿಕೆ ನಡೆಸಲು ಮುಂದೆ ಬರುವ ಎಸ್ಸಿ, ಎಸ್ಟಿ ಜನಾಂಗದವರಿಗೆ ಸಮಾಜ ಕಲ್ಯಾಣ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗಳ ಸಹಯೋಗದೊಂದಿಗೆ ರಾಜ್ಯ ಹಣಕಾಸು ಸಂಸ್ಥೆಯಿಂದ ಸೂಕ್ತ ಸಾಲ ಸೌಲಭ್ಯ ನೀಡಲು ಕ್ರಮ ವಹಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಸುಳ್ಳು ಜಾತಿಪ್ರಮಾಣ ಪತ್ರ ನೀಡಿರುವ ಕುರಿತು ಮಾಹಿತಿ ಇದ್ದರೂ ಕ್ರಮ ವಹಿಸುವಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳಿಂದ ವಿಳಂಬವಾಗುತ್ತಿರುವ ಬಗ್ಗೆ ಸಮಿತಿಯು ಅಸಮಾಧಾನ ವ್ಯಕ್ತಪಡಿಸಿದೆ. ಆ ಬಗ್ಗೆ ಆದ್ಯತೆಯ ಮೇರೆಗೆ ಕ್ರಮ ಜರಗಿಸಿ ಸಮಿತಿಗೆ ವರದಿ ನೀಡಬೇಕೆಂದು ಹಾಗೂ ಕೆಐಎಡಿಬಿಯಲ್ಲಿ ಪ್ರಸ್ತುತ ಖಾಲಿ ಇರುವ ಎಲ್ಲ ಬ್ಯಾಕ್‌ಲಾಗ್ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿ ಮಾಡಿ ಸಮಿತಿಗೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ.
ಪ್ರವಾಸೋದ್ಯಮ: ಎಸ್ಸಿ-ಎಸ್ಟಿ ಜನಾಂಗದವರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಪ್ರವಾಸೋದ್ಯಮ ಇಲಾಖೆಯು ಹೊಟೇಲ್ ಉದ್ಯಮದಲ್ಲಿ ಈ ಜನಾಂಗದವರು ತೊಡಗುವಂತಾಗಲು ಇನ್ನೂ ಹೆಚ್ಚಿನ ರೀತಿಯಲ್ಲಿ ಉಪಯುಕ್ತವಾಗುವ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಶಿಕ್ಷಣ ಇಲಾಖೆ: ಎಸ್ಸಿ-ಎಸ್ಟಿ ಹೆಸರಿನಲ್ಲಿ ನೋಂದಣಿಯಾದ ಸಂಸ್ಥೆಯನ್ನು ಯಾವುದೆ ಕಾರಣಕ್ಕೂ ಇತರೆ ವರ್ಗದವರಿಗೆ ಹಸ್ತಾಂತರವಾಗದ ಹಾಗೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಹಸ್ತಾಂತರವಾಗಿರುವ ಸಂಸ್ಥೆಗಳ ಬಗ್ಗೆ ತನಿಖೆ ನಡೆಸಿ ಸಮಿತಿಗೆ ವರದಿ ನೀಡಬೇಕು. ಪಂಚಾಯತ್‌ರಾಜ್ ಅನುದಾನವನ್ನು ಉಪಯೋಗಿಸಿಕೊಂಡು ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಗಳಿಗಾಗಿ ನೀರಿನ ವ್ಯವಸ್ಥೆ ಮಾಡಬೇಕು.
ಮಾಹಿತಿ ತಂತ್ರಜ್ಞಾನ-ಜೈವಿಕ ತಂತ್ರಜ್ಞಾನ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಲಭ್ಯವಾಗುವ ಕ್ರೋಡೀಕೃತ ಅನುದಾನವನ್ನು ಉಪಯೋಗಿಸಿಕೊಂಡು ವಿಶ್ವವಿದ್ಯಾನಿಲಯಗಳಲ್ಲಿ, ಕಾಲೇಜುಗಳಲ್ಲಿ, ಐಟಿಐ, ಡಿಪ್ಲೋಮಾ ಕಾಲೇಜುಗಳಲ್ಲಿ ಆಂಗ್ಲ ಭಾಷೆ ಸೇರಿದಂತೆ ವಿಜ್ಞಾನ, ಗಣಿತ, ವಿದ್ಯುನ್ಮಾನ ಹಾಗೂ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು.
ಎಸ್ಸಿ-ಎಸ್ಟಿ ಜನಾಂಗದವರಲ್ಲಿ ಬಿಸಿಎ, ಎಂಸಿಎ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ನೀಡಿ ಅವರನ್ನು ಸ್ವಯಂ ಉದ್ಯೋಗ ಮಾಡುವಂತೆ ಕಾರ್ಯಕ್ರಮ ರೂಪಿಸಬೇಕು. ಕಿಯೋನಿಕ್ಸ್ ಸಂಸ್ಥೆಯ ವತಿಯಿಂದ ಪ್ರತಿ ಜಿಲ್ಲೆ, ಪ್ರತಿ ತಾಲೂಕಿನಲ್ಲಿ ಎಸ್ಸಿ-ಎಸ್ಟಿ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ದೊರಕುವಂತಹ ಸೂಕ್ತ ತರಬೇತಿ ಕಾರ್ಯಕ್ರಮ ಜಾರಿಗೆ ತರಬೇಕು.
ಸರಕಾರಿ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಎಸ್ಸಿ-ಎಸ್ಟಿ ಜನಾಂಗದ ಮಕ್ಕಳಿಗಾಗಿ ಪ್ರತ್ಯೇಕವಾಗಿ ‘ಕರ್ನಾಟಕ ದರ್ಶನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ, ಸಮಾಜವನ್ನು ವಿಂಗಡನೆ ಮಾಡಿದಂತಾಗುತ್ತದೆ. ಆದುದರಿಂದ, ಮಕ್ಕಳಲ್ಲಿ ಸಾಮಾಜಿಕ ನ್ಯಾಯ ಕಲ್ಪನೆ ಬೆಸೆಯುವ ದಿಕ್ಕಿನಲ್ಲಿ ಎಲ್ಲ ಜನಾಂಗದ ಮಕ್ಕಳೊಂದಿಗೆ ಸೇರಿಸಿ ಈ ಕಾರ್ಯಕ್ರಮ ಮುಂದುವರಿಸುವುದು ಸೂಕ್ತ. ಈ ಬಗ್ಗೆ ಇಲಾಖೆಯು ಸೂಕ್ತ ಕ್ರಮ ಜರಗಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.





