ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜಿಗೆ ಕ್ರಮ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಬೆಂಗಳೂರು, ಮಾ.31: ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಗುರುವಾರ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಉನ್ನತೀಕರಣಗೊಳಿಸಿರುವ ವಿವಿಧ ವಿಭಾಗಗಳನ್ನು ಉದ್ಫಾಟಿಸಿದ ನಂತರ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯಯವರು ಆಯವ್ಯಯದಲ್ಲಿ ತಿಳಿಸಿರುವಂತೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಅನುಮತಿ ಮೇರೆಗೆ ಮುಂದಿನ ಶೈಕ್ಷಣಿಕ ವರ್ಷದೊಳಗೆ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಲು ಎಲ್ಲ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಅಲ್ಲದೆ, ಆಯವ್ಯಯದಲ್ಲಿ ತಿಳಿಸಿರುವಂತೆ ಕಾರವಾರ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ತೀವ್ರತರ ಹಾಗೂ ಮಾರಣಾಂತಿಕವಾದಂತಹ ವೈದ್ಯಕೀಯ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನಿರಂತರವಾಗಿ ಚಿಕಿತ್ಸೆಯನ್ನು ನೀಡುವ ಸಲುವಾಗಿ 9 ಹಾಸಿಗೆ ಸಾಮರ್ಥ್ಯವುಳ್ಳ ವೈದ್ಯಕೀಯ ತೀವ್ರ ನಿಗಾ ಘಟಕ ಸ್ಥಾಪನೆ ಹಾಗೂ ಶಸ್ತ್ರಚಿಕಿತ್ಸೆಯ ನಂತರ ರೋಗಿಗಳು ಚೇತರಿಸಿಕೊಳ್ಳುವ ತನಕ ಅವರ ಮೇಲೆ ನಿಗಾ ಇಡಲು 8 ಹಾಸಿಗೆ ಸಾಮರ್ಥ್ಯವುಳ್ಳ ಶಸ್ತ್ರಚಿಕಿತ್ಸಾ ನಂತರದ ಘಟಕವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, ತುರ್ತು ಶಸ್ತ್ರ ಚಿಕಿತ್ಸಾಗಾರ, ಅಪಘಾತ ಶಸ್ತ್ರ ಚಿಕಿತ್ಸಾಗಾರ ಹಾಗೂ ಸೋಂಕಿತ ರೋಗಿಗಳ ಶಸ್ತ್ರ ಚಿಕಿತ್ಸಾಗಾರ ಮತ್ತು ಕೇಂದ್ರೀಕೃತ ಆಕ್ಸಿಜನ್ ಹಾಗೂ ಸಕ್ಷನ್ ಪೂರೈಕೆಯನ್ನು ಆಸ್ಪತ್ರೆಯ ಎಲ್ಲ ವಾರ್ಡ್‌ಗಳಿಗೂ ವಿಸ್ತರಿಸಿರುವುದನ್ನು ಶರಣಪ್ರಕಾಶ್ ಪಾಟೀಲ್ ಉದ್ಘಾಟಿಸಿದರು.
ಕೇಂದ್ರೀಯ ಅಡುಗೆ ಮನೆಯನ್ನು ಆಧುನಿಕ ಸೌಲಭ್ಯ ಹೊಂದಿರುವ ನೂತನವಾಗಿ ನಿರ್ಮಿಸಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ನವೀಕೃತ ಮೂಲಭೂತ ಸೌಲಭ್ಯಗಳ ಎಆರ್‌ಟಿ ಘಟಕವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ವಾರ್ತಾ ಸಚಿವ ಆರ್. ರೋಷನ್ ಬೇಗ್ ಅವರು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ವೈದ್ಯಕೀಯ ಶಿಕ್ಷಣ ಸಚಿವರಿಗೆ ಬೇಡಿಕೆಯನ್ನು ಸಲ್ಲಿಸಿದರು.





