ಕಾಪು ಪುರಸಭೆಗೆ ಎ.24ರಂದು ಮೊದಲ ಚುನಾವಣೆ
ಉಡುಪಿ, ಮಾ.31: ಗ್ರಾಪಂಗಳಿಂದ ಉನ್ನತೀಕರಿಸಿದ ರಾಜ್ಯದ 53 ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ಘೋಷಿಸಿದ್ದು, ಇದರಂತೆ ಉಡುಪಿ ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಪು ಪುರಸಭೆಗೂ ಎ.24ರಂದು ಚುನಾವಣೆ ನಡೆಯಲಿದೆ.
ಚುನಾವಣಾ ನೀತಿ ಸಂಹಿತೆಯು ವೇಳಾಪಟ್ಟಿ ಪ್ರಕಟಿಸಿದ ಮಾ.31ರಿಂದಲೇ ಜಾರಿಗೆ ಬಂದಿದ್ದು, ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ಎ.27ರವರೆಗೆ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಚುನಾವಣಾ ವೇಳಾಪಟ್ಟಿ ಹೀಗಿದೆ. ಜಿಲ್ಲಾಧಿಕಾರಿಗಳು ಚುನಾವಣಾ ಹೊರಡಿಸುವ ದಿನಾಂಕ ಎ.5, ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ ಎ.12, ನಾಮಪತ್ರಗಳ ಪರಿಶೀಲನೆ ಎ.13, ಉಮೇದುವಾರಿಕೆ ಹಿಂದೆಗೆದುಕೊಳ್ಳಲು ಕೊನೆಯ ದಿನ ಎ.15, ಮತದಾನ ನಡೆಯುವ ದಿನ ಎ.24 (ಬೆಳಗ್ಗೆ 7ರಿಂದ ಸಂಜೆ 5ರವರೆಗೆ), ಅಗತ್ಯ ಬಿದ್ದರೆ ಮರು ಮತದಾನ ಎ.26, ಮತಗಳ ಎಣಿಕೆ ನಡೆಯುವ ದಿನ ಎ.27 (ಬೆಳಗ್ಗೆ 8ರಿಂದ).
ಕಾಪು, ಉಳಿಯಾರಗೋಳಿ ಹಾಗೂ ಮಲ್ಲಾರು ಗ್ರಾಪಂಗಳನ್ನು ಸೇರಿಸಿ ಕಾಪು ಪುರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಇದೀಗ ಇವುಗಳನ್ನು 23 ವಾರ್ಡ್‌ಗಳನ್ನಾಗಿ ವಿಭಾಗಿಸಲಾಗಿದೆ. ಈ 23 ವಾರ್ಡ್‌ಗಳ ಮೀಸಲಾತಿಯನ್ನೂ ಪ್ರಕಟಿಸಲಾಗಿದೆ. ಇವುಗಳ ವಿವರ ಹೀಗಿದೆ.
1.ಕೈಪುಂಜಾಲು- ಹಿಂದುಳಿದ ವರ್ಗ ‘ಬಿ’ (ಮಹಿಳೆ), 2.ಕೋತಲಕಟ್ಟೆ- ಪರಿಶಿಷ್ಟ ಜಾತಿ, 3.ಕರಾವಳಿ- ಸಾಮಾನ್ಯ, 4.ಪೊಲಿಪು ಗುಡ್ಡೆ-ಹಿಂದುಳಿದ ವರ್ಗ ‘ಎ’ (ಮಹಿಳೆ), 5.ದಂಡತೀರ್ಥ-ಸಾಮಾನ್ಯ, 6.ಕಲ್ಯಾ- ಹಿಂದುಳಿದ ವರ್ಗ ‘ಎ’, 7.ಭಾರತ್ ನಗರ- ಸಾಮಾನ್ಯ (ಮಹಿಳೆ), 8.ಬೀಡುಬದಿ- ಹಿಂದುಳಿದ ವರ್ಗ ‘ಎ’ (ಮಹಿಳೆ), 9.ಪೊಲಿಪು- ಸಾಮಾನ್ಯ, 10. ಕಾಪು ಪೇಟೆ- ಸಾಮಾನ್ಯ, 11.ಲೈಟ್ ಹೌಸ್- ಸಾಮಾನ್ಯ (ಮಹಿಳೆ).
12.ಕೊಪ್ಪಲಂಗಡಿ-ಹಿಂದುಳಿದ ವರ್ಗ ‘ಎ’, 13.ತೊಟ್ಟಂ- ಸಾಮಾನ್ಯ (ಮಹಿಳೆ), 14. ದುಗನ್‌ತೋಟ- ಹಿಂದುಳಿದ ವರ್ಗ ‘ಎ’ (ಮಹಿಳೆ), 15. ಮಂಗಳಪೇಟೆ- ಸಾಮಾನ್ಯ, 16. ಜನಾರ್ದನ ದೇವಸ್ಥಾನ- ಸಾಮಾನ್ಯ (ಮಹಿಳೆ), 17.ಬಡಗರ ಗುತ್ತು- ಹಿಂದುಳಿದ ವರ್ಗ ‘ಎ’, 18.ಕೊಂಬಗುಡ್ಡೆ- ಹಿಂದುಳಿದ ವರ್ಗ ‘ಬಿ’, 19.ಜನರಲ್ ಶಾಲೆ- ಪರಿಶಿಷ್ಟ ಜಾತಿ (ಮಹಿಳೆ), 20.ಗುಜ್ಜಿ- ಸಾಮಾನ್ಯ (ಮಹಿಳೆ), 21.ಗರಡಿ- ಸಾಮಾನ್ಯ (ಮಹಿಳೆ), 22. ಕುಡ್ತಿಮಾರ್- ಸಾಮಾನ್ಯ, 23.ಅಹ್ಮದಿ ಮೊಹಲ್ಲಾ-ಪರಿಶಿಷ್ಟ ಪಂಗಡ.







