ಗುಜರಾತ್ ವಿದ್ಯುತ್ ಘಟಕದ ಕುರಿತು ವಿಶ್ವ ಬ್ಯಾಂಕ್ ವಿರುದ್ಧದ ಮೊಕದ್ದಮೆ ವಜಾ
ಅಮೆರಿಕ ಜಿಲ್ಲಾ ನ್ಯಾಯಾಧೀಶರ ತೀರ್ಪು
ನ್ಯೂಯಾರ್ಕ್, ಮಾ.31: ಗುಜರಾತ್‌ನ ವಿದ್ಯುತ್ ಘಟಕವೊಂದಕ್ಕೆ ಸಾಲ ನೀಡಿರುವ ಕುರಿತು ವಿಶ್ವ ಬ್ಯಾಂಕ್‌ನ ವಿರುದ್ಧ ಭಾರತೀಯ ಮೀನುಗಾರರು ಹಾಗೂ ರೈತರು ಹೂಡಿದ್ದ ಮೊಕದ್ದಮೆಯೊಂದನ್ನು ಅಮೆರಿಕ ಒಕ್ಕೂಟದ ನ್ಯಾಯಾಧೀಶರೊಬ್ಬರು ವಜಾಗೊಳಿಸಿದ್ದಾರೆ.
ವಿದ್ಯುತ್ ಘಟಕವು ಪರಿಸರವನ್ನು ನಾಶ ಗೊಳಿಸಿದೆಯೆಂದು ಅವರು ಆರೋಪಿಸಿದ್ದರು.
ವಿಶ್ವಬ್ಯಾಂಕ್‌ನ ಅಂತಾರಾಷ್ಟ್ರೀಯ ಹಣಕಾಸು ನಿಗಮವು (ಐಎಫ್‌ಸಿ) ರಕ್ಷಣೆಯನ್ನು ಹೊಂದಿದೆ. ಅದರ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ ಹೂಡುವಂತಿಲ್ಲವೆಂದು ಅಮೆರಿಕದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಆದೇಶ ನೀಡಿದ್ದಾರೆ.
ಕಲ್ಲಿದ್ದಲು ಇಂಧನಾಧಾರತಿ ಮುಂದ್ರಾ ವಿದ್ಯುತ್ ಘಟಕ ನಿರ್ಮಾಣಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ನಿಗಮವು 45 ಕೋಟಿ ಡಾಲರ್ ಸಾಲ ನೀಡಿತ್ತು. ಘಟಕವು 2013ರಲ್ಲಿ ಪೂರ್ಣ ಪ್ರಮಾಣದ ಉತ್ಪಾದನೆ ಆರಂಭಿಸಿತ್ತು.
ಯೋಜನೆಯನ್ನು ಅನುಷ್ಠಾನಗೊಳಿಸಿದ್ದ ಟಾಟಾ ಪವರ್‌ನ ಅಂಗ ಸಂಸ್ಥೆಯಾದ ಕೋಸ್ಟಲ್ ಗುಜರಾತ್ ಪವರ್ ಲಿಮಿಟೆಡ್, ಈ ಯೋಜನೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ. 1.6ಕೋಟಿ ದೇಶೀಯ ಬಳಕದಾರರಿಗೆ ಲಾಭವಾಗುತ್ತದೆ ಹಾಗೂ ಕೈಗಾರಿಕೆಗಳಿಗೆ ಮತ್ತು ಕೃಷಿಗೆ ಸ್ಪರ್ಧಾತ್ಮಕ ದರದಲ್ಲಿ ವಿದ್ಯುತ್ ಒದಗಿಸುತ್ತದೆಂದು ಹೇಳಿತ್ತು.
ಆದರೆ, ಅದರಿಂದ ಪರಿಸರಕ್ಕೆ ಭಾರೀ ಹಾನಿಯಾಗಿದೆಯೆಂದು ಘಟಕದ ಬಳಿ ವಾಸಿಸುತ್ತಿರುವ ಬೆಸ್ತರು, ರೈತರು, ಮತ್ತಿತರರು ಆರೋಪಿಸಿದ್ದರು.
ವಿದ್ಯುತ್ ಘಟಕದಿಂದ ಸೋರಿಕೆಯಾಗುತ್ತಿರುವ ಉಪ್ಪು ನೀರು, ಅಂತರ್ಜಲವನ್ನು ಕುಡಿಯಲಾಗದಂತೆ ಹಾಗೂ ನೀರಾವರಿಗೆ ಯೋಗ್ಯವಲ್ಲದಂತೆ ಮಾಡಿದೆ. ಶೀರಲೀಕರಣ ವ್ಯವಸ್ಥೆಯ ಬಿಸಿ ನೀರು ಮೀನುಗಳಿಗೆ ಹಾನಿಯುಂಟು ಮಾಡಿದೆ ಹಾಗೂ ಗಾಳಿಯ ಗುಣಮಟ್ಟವನ್ನು ಕೆಡಿಸಿದೆಯೆಂದು ಕೊಲಂಬಿಯ ಜಿಲ್ಲೆಯಲ್ಲಿ ಕಳೆದ ವರ್ಷ ಹೂಡಿದ್ದ ಮೊಕದ್ದಮೆಯಲ್ಲಿ ಅವರು ಹೇಳಿದ್ದರು.
ನಿಧಿ ಒದಗಣೆ ಹಾಗೂ ಸಾಲದ ಮೇಲ್ವಿಚಾರಣೆಯಲ್ಲಿ ಐಎಫ್‌ಸಿ ಬೇಜವಾಬ್ದಾರಿ ಹಾಗೂ ನಿರ್ಲಕ್ಷ ತೋರಿಸಿದೆಯೆಂದು ಆರೋಪಿಸಿದ್ದ ದಾವೆದಾರರು, ತಮ್ಮ ಜೀವನ ಪದ್ಧತಿಯು ಮೂಲಭೂತವಾಗಿ ಬೆದರಿಕೆಗೊಳಗಾಗ ಬಹುದು ಅಥವಾ ನಾಶವಾಗಬಹುದೆಂದು ದೂರಿದ್ದರು.
ಆದರೆ, ಅಂತಾರಾಷ್ಟ್ರೀಯ ಸಂಘಟನೆಗಳ ರಕ್ಷಣಾ ಕಾಯ್ದೆಯನ್ವಯ,ಐಎಫ್‌ಸಿಯ ವಿರುದ್ಧ ಅಮೆರಿಕದಲ್ಲಿ ದಾವೆ ಹೂಡುವಂತಿಲ್ಲವೆಂದು ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜೋನ್ ಬೇಟ್ಸ್ ಕಳೆದ ವಾರ ತೀರ್ಪು ನೀಡಿದ್ದಾರೆ.
ರೈತರು, ದಾವೆ ಹೂಡಿದ್ದ ಅಮೆರಿಕದ ಲಾಭೇತರ ಅರ್ತ್ ರೈಟ್ಸ್ ಇಂಟರ್ನ್ಯಾಶನಲ್‌ಗೆ ಮೇಲ್ಮನವಿ ಸಲ್ಲಿಸಲು ಯೋಚಿಸುತ್ತಿದ್ದಾರೆಂದು ಥಾಮನ್ಸ್ ರಾಯ್ಪುರ್ ಫೌಂಡೇಶನ್ ತಿಳಿಸಿದೆ.
ಇದು ತಮ್ಮ ಜೀವ ಹಾಗೂ ಜೀವನಕ್ಕಾಗಿ ನಡೆಸುತ್ತಿರುವ ಹೋರಾಟವಾಗಿದೆ. ತಮಗೆ ಜಯ ಲಭಿಸುವುದೆಂದು ನಂಬಿದ್ದೇವೆ ಎಂದು ಪ್ರಕರಣದ ಒಂದು ಕಕ್ಷಿಯಾಗಿರುವ ನವೀನಾಲ್ ಪಂಚಾಯತ್‌ನ ಮುಖ್ಯಸ್ಥ ಗಜೇಂದ್ರ ಸಿಂಹ ಜಡೇಜಾ ಎಂಬವರು ಇ-ಮೇಲ್ ಒಂದರಲ್ಲಿ ಹೇಳಿದ್ದಾರೆ.
ಸಂಘಟನೆಯು ಸಕ್ರಿಯ ಕಾನೂನು ವಿಚಾರಗಳ ಕುರಿತಾಗಿ ಪ್ರತಿಕ್ರಿಯಿಸುವುದಿಲ್ಲ. ಕೋಸ್ಟಲ್ ಗುಜರಾತ್ ಪವರ್ ಜಾರಿಗೊಳಿಸುತ್ತಿರುವ ದೂರು ಪರಿಹಾರ ಕ್ರಮಗಳನ್ನೊಳಗೊಂಡಿದೆಯೆಂದು ಐಎಫ್‌ಸಿಯ ವಕ್ತಾರೆ ಹೇಳಿದರಾದರೂ, ಆ ಬಗ್ಗೆ ವಿವರ ನೀಡಲ್ಲ.





