ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ಏಕಕಾಲದಲ್ಲಿ ಚುನಾವಣೆ?
ಹೊಸದಿಲ್ಲಿ, ಮಾ.31 : ಪಂಚಾಯತ್‌ನಿಂದ ಹಿಡಿದು ರಾಜ್ಯ ವಿಧಾನಸಭೆಗಳು ಹಾಗೂ ಪಾರ್ಲಿಮೆಂಟ್‌ಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪವೊಂದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಸತ್ತಿನ ಬಜೆಟ್ ಅಧಿವೇಶನದ ಮೊದಲು ಫೆಬ್ರವರಿಯಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಇರಿಸಿದ್ದು ಇದಕ್ಕೆ ವಿಪಕ್ಷಗಳಿಂದ ಪೂರಕ ಪ್ರತಿಕ್ರಿಯೆ ದೊರೆತಿದೆಯೆಂದು ಬಿಜೆಪಿ ಮೂಲಗಳು ತಿಳಿಸಿವೆ.
ಮೇಲಿನ ವಿಚಾರವನ್ನು ಪಕ್ಷದ ಅಧಿವೇಶನದ ಮುನ್ನ ಈ ತಿಂಗಳಾರಂಭದಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯೊಂದರಲ್ಲಿ ತಿಳಿಸಲಾಯಿತು.
ವಿವಿಧ ಹಂತಗಳ ಚುನಾವಣೆಗಳು ವಿವಿಧ ಸಮಯ ನಡೆಯುವುದರಿಂದ ಪಕ್ಷ ಕಾರ್ಯಕರ್ತರು ತಮ್ಮ ಹೆಚ್ಚಿನ ಸಮಯವನ್ನು ಸಾಮಾಜಿಕ ಕಾರ್ಯಗಳ ಬದಲು ರಾಜಕೀಯ ಚಟುವಟಿಕೆಗಳಲ್ಲಿ ಕಳೆಯುತ್ತಾರೆಂಬ ಅಂಶವನ್ನು ಪ್ರಧಾನಿ ಸಭೆಗೆ ಮನಗಾಣಿಸಿದರಲ್ಲದೆ ಆಗಾಗ ನಡೆಯುತ್ತಿರುವ ಚುನಾವಣೆಗಳಿಂದಾಗಿ ಕಲ್ಯಾಣ ಕಾರ್ಯಕ್ರಮಗಳು ಜನರಿಗೆ ತಲುಪಲು ಕೂಡ ಅಡಚಣೆಯಾಗುತ್ತಿದೆ ಎಂದು ಪ್ರಧಾನಿ ಪಕ್ಷ ಕಾರ್ಯಕರ್ತರಿಗೆ ವಿವರಿಸಿದ್ದರೆನ್ನಲಾಗಿದೆ.
ಈ ವಿಚಾರದಲ್ಲಿ ರಾಜಕೀಯ ಪಕ್ಷಗಳಲ್ಲಿ ಸಹಮತವಿದೆಯೆಂಬ ಅಭಿಪ್ರಾಯವನ್ನು ಸಭೆಯ ಮುಂದೆ ತಿಳಿಸಲಾಯಿತಾದರೂ ಇಂತಹ ಒಂದು ಸಮಗ್ರ ಪ್ರಸ್ತಾಪವನ್ನು ಸದನದ ಮುಂದಿರಿಸಿದಾಗ ಅವುಗಳು ಹೇಗೆ ಪ್ರತಿಕ್ರಿಯಿಸಬಹುದು ಎಂಬ ಬಗ್ಗೆ ಸರಕಾರಕ್ಕೆ ಖಾತರಿಯಿಲ್ಲವೆಂದೂ ಹೇಳಲಾಯಿತು.
ಹಿಂದೊಮ್ಮೆ ಇದೇ ತೆರನಾದ ಪ್ರಸ್ತಾಪವನ್ನು ಹಿರಿಯ ಬಿಜೆಪಿ ನಾಯಕ ಎಲ್. ಕೆ .ಅಡ್ವಾಣಿ ಮುಂದಿಟ್ಟಿದ್ದರು. 2012ರಲ್ಲಿ ಬರೆಯಲಾದ ಬ್ಲಾಗೊಂದರಲ್ಲಿ ಅಡ್ವಾಣಿಯವರು ರಾಷ್ಟ್ರಪತಿಯವರು ಚುನಾವಣಾ ಸುಧಾರಣೆ ತರಲು ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದರು.
ಸಿಬ್ಬಂದಿ, ಸಾರ್ವಜನಿಕ ದೂರುಗಳ, ಕಾನೂನು ಹಾಗೂ ನ್ಯಾಯಕ್ಕೆ ಸಂಬಂಧಪಟ್ಟ ಸಂಸದೀಯ ಸ್ಥಾಯಿ ಸಮಿತಿಯೂ ತನ್ನ ವರದಿಯೊಂದರಲ್ಲಿ ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಆದರೆ ಈ ವರದಿಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಹಾಗೂ ಸಿಪಿಐ ಇಂತಹ ವ್ಯವಸ್ಥೆಯೊಂದನ್ನು ಜಾರಿಗೊಳಿಸುವ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತ ಪಡಿಸಿದ್ದರೆ ತೃಣಮೂಲ ಕಾಂಗ್ರೆಸ್ ಇಂತಹ ಪ್ರಸ್ತಾಪವನ್ನೇ ತಿರಸ್ಕರಿಸಿತ್ತು.





