ಕರ್ತವ್ಯಕ್ಕೆ ಗೈರು: ಏರ್ ಇಂಡಿಯಾ ಕಮಾಂಡರ್ ಅಮಾನತು
ಹೊಸದಿಲ್ಲಿ,ಮಾ.31: ಸರಕಾರಿ ಸ್ವಾಮ್ಯದ ಏರ್ ಇಂಡಿಯಾದ ಭೋಪಾಲ-ಮುಂಬೈ ನಡುವಿನ ಚೊಚ್ಚಲ ವಿಮಾನಯಾನವನ್ನು ನಿರ್ವಹಿಸಬೇಕಿದ್ದ ಕಮಾಂಡರ್ ಕರ್ತವ್ಯಕ್ಕೆ ಗೈರುಹಾಜರಾಗಿದ್ದಕ್ಕಾಗಿ ಆತನನ್ನು ಸಂಸ್ಥೆಯು ಅಮಾನತುಗೊಳಿಸಿದೆ.
ತನ್ನ ಬೇಸಿಗೆ ವೇಳಾಪಟ್ಟಿಯಂತೆ ಏರ್ ಇಂಡಿಯಾ ಇತ್ತೀಚಿಗೆ ಹಲವಾರು ಹೊಸ ಯಾನಗಳು ಮತ್ತು ಮಾರ್ಗಗಳನ್ನು ಪ್ರಕಟಿಸಿದ್ದು,ಇವು ಕಳೆದ ರವಿವಾರದಿಂದ ಕಾರ್ಯಾರಂಭಗೊಂಡಿವೆ. ಈ ಪೈಕಿ ಮುಂಬೈ-ಭೋಪಾಲ ಯಾನವೂ ಸೇರಿದೆ.
ಕಮಾಂಡರ್ ದಿಲ್ಲಿಗೆ ಹೋಗಲು ಬಯಸಿದ್ದ. ಆದರೆ ತಾನು ಕರ್ತವ್ಯ ನಿರ್ವಹಿಸಬೇಕಾದ ವಿಮಾನವು ಮುಂಬೈಗೆ ತೆರಳಲಿದೆ ಎನ್ನುವುದು ಗೊತ್ತಾದಾಗ ಆತ ಸ್ಥಳದಿಂದ ನಾಪತ್ತೆಯಾಗಿದ್ದ. ಇದರಿಂದಾಗಿ ಪ್ರಯಾಣಿಕರು ಅತಂತ್ರಗೊಂಡಿದ್ದರು. ಈ ಘಟನೆ ರವಿವಾರ ನಡೆದಿತ್ತು ಎಂದು ಏರ್ ಇಂಡಿಯಾದ ಅಧಿಕಾರಿಯೋರ್ವರು ತಿಳಿಸಿದರು.
ಕೊನೆಯ ಕ್ಷಣದಲ್ಲಿ ಪೈಲಟ್ ಅಲಭ್ಯನಾಗಿದ್ದು ಸಂಸ್ಥೆಯನ್ನು ಪೇಚಿಗೆ ಸಿಲುಕಿಸಿತ್ತು. ಅಲ್ಲದೆ ನೂತನ ವಿಮಾನಯಾನದ ಮೊದಲ ದಿನವೇ ಟಿಕೆಟ್‌ಗಳ ರದ್ದತಿ ಗ್ರಾಹಕರಿಗೆ ತಪ್ಪು ಸಂದೇಶವನ್ನು ರವಾನಿಸುವುದರಿಂದ ತೀವ್ರ ಮುಜುಗರಕ್ಕೂ ಅದು ಗುರಿಯಾಗಬೇಕಾಗುತ್ತಿತ್ತು. ಸತತ ಪ್ರಯತ್ನಗಳ ನಂತರ ಕೊನೆಗೂ ಯಾನವನ್ನು ನಿರ್ವಹಿಸಲು ಪೈಲಟ್ ಓರ್ವನನ್ನು ಹುಡುಕಿಕೊಳ್ಳುವಲ್ಲಿ ಅದು ಯಶಸ್ವಿಯಾಗಿತ್ತು.
ತಪ್ಪಿತಸ್ಥ ಕಮಾಂಡರ್‌ನನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.





