ರಾಜಕಾರಣಿಗಳಿಗಿರುವ ಭದ್ರತೆ ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯಾಕಿಲ್ಲ?:
ವಿದ್ಯಾರ್ಥಿಗಳ ಹೆತ್ತವರ ಪ್ರಶ್ನೆ : ದ್ವಿತೀಯ ಪಿಯು ಪ್ರಶ್ನೆಪ್ರತಿಕೆ ಸೋರಿಕೆ
ಮಂಗಳೂರು, ಮಾ.31: ‘‘ರಾಜ ಕಾರಣಿಗಳು, ಸಚಿವರು ರಸ್ತೆಯಲ್ಲಿ ನಡೆದಾಡಲು ಭದ್ರತೆಯನ್ನು ಒದಗಿಸ ಲಾಗುತ್ತದೆ. ಆದರೆ ನಮ್ಮ ಮಕ್ಕಳ ಭವಿಷ್ಯವನ್ನೇ ನಿರ್ಧರಿಸುವ ಪ್ರಶ್ನೆ ಪತ್ರಿಕೆಗಳ ಬಗ್ಗೆ ಭದ್ರತೆ ಯಾಕಿಲ್ಲ? ಪ್ರಶ್ನೆಪತ್ರಿಕೆ ಯಾವಾಗ, ಹೇಗೆ ಬೇಕಾದರೂ ಸೋರಿಕೆ ಆಗುತ್ತದೆ. ಮಕ್ಕಳಿಗೆ ಮಾನಸಿಕವಾಗಿ ಒತ್ತಡವಾಗುತ್ತದೆ ಎಂದಾದರೆ ಶಿಕ್ಷಣ ಮಂಡಳಿಯಾದರೂ ಯಾಕಾಗಿ?’’
ಈ ಪ್ರಶ್ನೆಗಳು ಮಂಗಳೂರು ನಗರದ ದ್ವಿತೀಯ ಪಿಯುಸಿ ಪೋಷಕರಿಂದ ಇಂದು ವ್ಯಕ್ತವಾಗಿದೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ರಸಾಯನಶಾಸ್ತ್ರ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇಂದು ಮುಂಜಾನೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಲ್ಪಟ್ಟ ಕಾರಣ ಕೆಲ ಆಕ್ರೋಶಿತ ಪೋಷಕರು ಹಾಗೂ ವಿದ್ಯಾರ್ಥಿಗಳು ನಗರದ ರಥಬೀದಿಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂದರ್ಭ ಈ ಮಾತುಗಳು ಕೇಳಿಬಂತು. ‘‘ನಮ್ಮ ಮಕ್ಕಳು ಈಗಾಗಲೇ ಎರಡು ವರ್ಷಗಳಿಂದ ನಿದ್ದೆಗೆಟ್ಟು ದ್ವಿತೀಯ ಪಿಯುಸಿಗಾಗಿ ಸಿದ್ಧತೆ ನಡೆಸಿದ್ದಾರೆ. ರಸಾಯನಶಾಸ್ತ್ರ ಪರೀಕ್ಷೆ ಈ ಹಿಂದೆ ಮುಂದೂಡಿ ಇಂದಿಗೆ ನಿಗದಿಯಾಗಿತ್ತು. ಆದರೆ ಬೆಳಗ್ಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸುದ್ದಿ ಹೊರಬಿತ್ತು. ಇದಕ್ಕಾಗಿ ಪರೀಕ್ಷೆ ಮುಂದೂಡಲಾಗಿದೆ. ಇದರಿಂದ ಮಕ್ಕಳು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಈ ಪರೀಕ್ಷೆ ಜತೆಯಲ್ಲೇ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಕಾಮೆಡ್‌ಕೆ, ಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧತೆ ನಡೆಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ವಿಫಲವಾಗುವ ಈ ಪಿಯು ಬೋರ್ಡ್ ಬೇಡ. ಅದನ್ನು ಮುಚ್ಚಿಬಿಡಿ’’ ಎಂದು ವಿದ್ಯಾರ್ಥಿನಿಯೊಬ್ಬಳ ತಾಯಿ ತಿಲೋತ್ತಮಾ ಆಕ್ರೋಶ ವ್ಯಕ್ತಪಡಿಸಿದರು. ‘‘ಮಕ್ಕಳ ಭವಿಷ್ಯದ ಬಗ್ಗೆ ಚೆಲ್ಲಾಟವಾಡಲಾಗುತ್ತಿದೆ. ಎಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆಯೋ ಅಲ್ಲಿ ಮರು ಪರೀಕ್ಷೆ ಮಾಡಲಿ. ಇಲ್ಲಿ ಈಗಾಗಲೇ ನಡೆಸಿರುವ ಪರೀಕ್ಷೆಯನ್ನು ಮಾನ್ಯಗೊಳಿಸಬೇಕು. ಈ ರೀತಿ ಮಕ್ಕಳನ್ನು ಮತ್ತು ಪೋಷಕರನ್ನು ಗೊಂದಲ, ಒತ್ತಡಕ್ಕೆ ಸಿಲುಕಿಸಬಾರದು’’ ಎಂದು ಪೋಷಕರೊಬ್ಬರು ಪ್ರತಿಭಟನೆಯ ಸಂದರ್ಭ ಒತ್ತಾಯಿಸಿದರು. ಪಿಯು ಬೋರ್ಡ್ ವಿರುದ್ಧ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆಯ ಸಂದರ್ಭ ನ್ಯಾಯಕ್ಕಾಗಿ ಆಗ್ರಹಿಸಿದರು. ಗೊಂದಲ, ಆತಂಕಕ್ಕೆ ಕಾರಣವಾದ ಪಿಯು ಬೋರ್ಡ್ ನಿರ್ದೇಶಕರ ನಡೆ
ಇಂದು ಬೆಳಗ್ಗೆ ರಸಾಯನಶಾಸ್ತ್ರ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಕಾರಣಕ್ಕೆ ಪರೀಕ್ಷೆಯನ್ನು ಮುಂದೂಡಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಹೊರಡಿಸಿದ್ದರು. ಆದರೆ ಮಂಗ ೂರು ನಗರದಲ್ಲಿ ಈ ಬಗ್ಗೆ ಅರಿವಿಲ್ಲದೆ ಕೆಲ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಕೆಲ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬಂದು ವಿಚಾರಣೆ ನಡೆಸಿದ ಘಟನೆಯೂ ನಡೆದಿದೆ. ಮಾತ್ರವಲ್ಲದೆ, ಕೆಲವರು ಟಿವಿ ಚಾನೆಲ್‌ಗಳಲ್ಲಿ ಪರೀಕ್ಷೆ ಮುಂದೂಡಿದ ಸುದ್ದಿಯಿಂದ ಗೊಂದಲಕ್ಕೀಡಾಗಿ ಸಿಕ್ಕ ಸಿಕ್ಕವರಿಗೆ ಕರೆ ಮಾಡಿ ವಿಚಾರಿಸಿದ ಪ್ರಸಂಗವೂ ನಡೆದಿದೆ. ಒಟ್ಟಿನಲ್ಲಿ ಪಿಯು ಬೋರ್ಡ್ ನಿರ್ದೇಶಕರ ನಡೆ ಗೊಂದಲ, ಅತಂಕಕ್ಕೆ ಕಾರಣವಾಯಿತು.
ಸಿಪಿಐ ಖಂಡನೆ
ದ್ವಿತೀಯ ಪಿಯು ರಸಾಯನಶಾಸ್ತ್ರ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ 2ನೆ ಬಾರಿ ಸೋರಿಕೆಯಾಗಿರುವುದು ಖಂಡ ನೀಯ. ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಚಿವ ಕಿಮ್ಮನೆ ರತ್ನಾಕರ್ ಇದಕ್ಕೆ ನೇರ ಹೊಣೆಗಾರರು ಎಂದು ಸಿಪಿಐ ಜಿಲ್ಲಾ ಜೊತೆ ಕಾರ್ಯದರ್ಶಿ ವಿ.ಸೀತಾರಾಮ ಬೇರಿಂಜ ತಿಳಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಯಾಗಲು ಕಾರಣರಾದ ಅಧಿಕಾರಿಗಳು, ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರಶ್ನೆ ಪತ್ರಿಕೆಯನ್ನು ತಯಾರಿಸಿ ಗೊಂದಲವಿಲ್ಲದಂತೆ ಪರೀಕ್ಷೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಶಿಕ್ಷಣ ಸಚಿವರು ರಾಜೀನಾಮೆ ನೀಡಲಿ: ಪೂಜಾರಿ
ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ವಿಷಯಕ್ಕೆ ಸಂಬಂಧಿಸಿ ಶಿಕ್ಷಣ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.21ರಂದು ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ 40 ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಪ್ರಕರಣದಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಿದರೆ ಸಾಕೇ? ಸಚಿವರಿಗೆ ಜವಾಬ್ದಾರಿ ಬೇಡವೇ? ಸಚಿವರು ಅಧಿಕಾರಕ್ಕೆ ಅಂಟಿಕೊಳ್ಳದೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ. ರಾಜೀನಾಮೆ ಕೊಡಲು ನಿರಾಕರಿಸಿದರೆ ಮುಖ್ಯಮಂತ್ರಿಯವರು ಅವರನ್ನು ಸಂಪುಟದಿಂದ ಉಚ್ಚಾಟನೆ ಮಾಡಲಿ ಎಂದರು.
ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿ ಕೇವಲ ಅಧಿಕಾರಿಗಳ ಅಮಾನತಿನಿಂದ ಏನೂ ಆಗದು. ಕೆಲವು ದಿನಗಳ ಬಳಿಕ ಮತ್ತೆ ಕೆಲಸಕ್ಕೆ ಹಾಜರಾಗುತ್ತಾರೆ. ಇದೊಂದು ಕ್ರಿಮಿನಲ್ ನಿರ್ಲಕ್ಷ ಪ್ರಕರಣ. ಸರಕಾರ ಇದನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೂಜಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಉಮೇಶ್ವಂದ್ರ, ಟಿ.ಕೆ.ಸುಧೀರ್, ವಿಶ್ವಾಸ್‌ಕುಮಾರ್ ದಾಸ್, ಾರೂಕ್ ಉಳ್ಳಾಲ್, ರಮಾನಂದ ಪೂಜಾರಿ, ಮೋಹನ್ ಮೆಂಡನ್, ಕರುಣಾಕರ ಶೆಟ್ಟಿ, ನೀರಜ್ ಪಾಲ್, ಮನೀಷ್ ಬೋಳಾರ್ ಉಪಸ್ಥಿತರಿದ್ದರು.
ಶಿಕ್ಷಣ ಸಚಿವರ ರಾಜೀನಾಮೆಗೆ ಪಾಲೆಮಾರ್ ಆಗ್ರಹ
ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಸಚಿವ ಕಿಮ್ಮನೆ ರತ್ನಾಕರ್ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಆಗ್ರಹಿಸಿದ್ದಾರೆ.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ವಿಷಯದ ಪ್ರಶ್ನೆಪತ್ರಿಕೆ ಎರಡು ಬಾರಿ ಸೋರಿಕೆಯಾಗಿರುವುದು ಚರಿತ್ರೆಯಲ್ಲಿ ಇದೇ ಮೊದಲು. ಸರಕಾರಕ್ಕೆ ಆಡಳಿತ ವರ್ಗದ ಮೇಲೆ ಹಿಡಿತವಿಲ್ಲ ಎಂಬುದನ್ನು ಇದು ತೋರಿಸುತ್ತದೆ. ವಿದ್ಯಾರ್ಥಿಗಳಿಗೆ ಆದ ನಷ್ಟಕ್ಕೆ ಯಾರು ಹೊಣೆ ಹೊರುತ್ತಾರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ 1.74 ಸಾವಿರ ಮಕ್ಕಳು ಪಿ.ಯು. ಪರೀಕ್ಷೆ ಬರೆದಿದ್ದು ಸರಕಾರ ಅವರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ಎ.3ರಂದು ರಾಷ್ಟ್ರದಾದ್ಯಂತ ಜೆಇಇ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆ ಬರೆಯುವ ಮಕ್ಕಳಿಗೆ ಇದರಿಂದ ಅನನುಕೂಲವಾಗಿದೆ ಎಂದು ಹೇಳಿದ ಅವರು, ಸರಕಾರದ ದುರಾಡಳಿತದಿಂದ ಈ ರೀತಿ ಆಗಿದೆ. ಮಕ್ಕಳು, ಹೆತ್ತವರು ಗೊಂದಲದಲ್ಲಿದ್ದು ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಉಮಾನಾಥ ಕೋಟ್ಯಾನ್, ನಿತೀನ್‌ಕುಮಾರ್ ಉಪಸ್ಥಿತರಿದ್ದರು.
ಬಿಜೆಪಿ ಆಗ್ರಹ
ದ್ವಿತೀಯ ಪಿಯುಸಿ ರಸಾ ಯನ ಶಾಸ್ತ್ರದ ಪ್ರಶ್ನೆಪತ್ರಿಕೆ ಎರಡೆರಡು ಬಾರಿ ಬಹಿರಂಗ ಗೊಂಡಿರುವ ಹಿನ್ನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ರಾಜೀನಾಮೆ ನೀಡುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಪತ್ರಿಕೆಯ ಗೌಪ್ಯತೆಯನ್ನು ಕಾಪಾಡುವಲ್ಲಿ ಅಧಿಕಾರಿಗಳು ಮತ್ತು ಇಲಾಖೆ ಎರಡೆರಡು ಬಾರಿ ವಿಫಲಗೊಂಡಿರುವುದು ತೀರಾ ಆಶ್ಚರ್ಯವನ್ನುಂಟು ಮಾಡಿದೆ. ಎರಡೆರಡು ಬಾರಿ ಉತ್ತರ ಬರೆಯಲು ಪ್ರಯತ್ನಿಸಿ ಈಗ 3ನೆ ಸಲಕ್ಕೆ ಮುಂದೂಡಲ್ಪಡುವ ಮೂಲಕ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುವ ಕೆಲಸವನ್ನು ಸರಕಾರ ಮಾಡಿದೆ ಎಂದು ಆರೋಪಿಸಿರುವ ತಿಂಗಳೆ, ಪ್ರಶ್ನೆ ಪತ್ರಿಕೆ ಬಹಿರಂಗದ ಹಿನ್ನೆಲೆಯನ್ನು ಬಯಲು ಪಡಿಸುವುದಲ್ಲದೆ ಅದರ ಹಿಂದಿರುವ ವ್ಯಕ್ತಿಗಳ ಬಗ್ಗೆ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಎಸ್ಸೆಸ್ಸೆಫ್ ಆಗ್ರಹ
ಪಿಯು ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಮರು ಪರೀಕ್ಷೆ ನಿಗದಿಗೊಳಿಸಿದ ಮೇಲೂ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಯೂ ಸೋರಿಕೆಯಾಗಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆಯೆಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಕಳಕಳ ವ್ಯಕ್ತಪಡಿಸಿದ್ದು ಇದನ್ನು ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದೆ.
ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಉಪನ್ಯಾಸಕರ ಬಹಿಷ್ಕಾರ ಮೊದಲಾದ ಬೆಳವಣಿಗೆಗಳು ವಿದ್ಯಾರ್ಥಿಗಳ ಭವಿಷ್ಯತ್ತಿಗೆ ಮಾರಕವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ಪರಿಗಣಿಸಿ ಸರಕಾರ ಕೂಡಲೇ ಸ್ಪಂದಿಸಬೇಕೆಂದು ಎಸ್ಸೆಸ್ಸೆಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಬೆಂಗಳೂರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
ಸಮಾನತಾ ಮಂಚ್ ಖಂಡನೆ
ದ್ವಿತೀಯ ಪಿಯು ರಸಾಯನ ಶಾಸ್ತ್ರ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಯು ಸೋರಿಕೆ ಯಾಗಿರುವುದನ್ನು ಮಂಗಳೂರಿನ ಮಾನವ್ ಸಮಾನತಾ ಮಂಚ್ ತೀವ್ರವಾಗಿ ಖಂಡಿಸಿದೆ.







