ನೇತಾಜಿ ಸಾವಿನ ರಹಸ್ಯ ಮತ್ತಷ್ಟು ಗೋಜಲು
ಹೈದರಾಬಾದ್, ಮಾ:31 : ನೇತಾಜಿ ಸುಭಾಸ್‌ಚಂದ್ರ ಬೋಸ್ ಅವರ ಸಾವಿನ ಸುತ್ತವಿರುವ ರಹಸ್ಯ ಮತ್ತಷ್ಟು ಗೋಜಲಾಗಿದ್ದು, ಮೋದಿ ಸರಕಾರ ಮಂಗಳವಾರ ಬಿಡುಗಡೆಗೊಳಿಸಿದ ಕೆಲವೊಂದು ಕಡತಗಳು ಅವರು ತೈವಾನಿನಲ್ಲಿ ಆಗಸ್ಟ್ 18,1945ರಲ್ಲಿ ನಡೆದ ವಿಮಾನ ಪತನವೊಂದರಲ್ಲಿ ಸಾವಿಗೀಡಾಗಿದ್ದಾರೆಂದು ಹೇಳಲಾದ ದಿನಾಂಕದ ಬಳಿಕ ಮೂರು ಬಾರಿ ಬಾನುಲಿ ಭಾಷಣ ಮಾಡಿದ್ದಾರೆಂದು ಹೇಳುತ್ತಿವೆ.
ಕಡತ ಸಂಖ್ಯೆ 870 /111/ಪಿ/16/92 ಪ್ರಕಾರ 31 ಮೀಟರ್ ಬ್ಯಾಂಡ್‌ನಲ್ಲಿ ಮಾಡಲಾದ ಬೋಸ್ ಅವರ ಬಾನುಲಿ ಪ್ರಸಾರವನ್ನು ಮಾನಿಟರಿಂಗ್ ಸರ್ವಿಸ್ ಒಂದಕ್ಕೆ ಸಿಕ್ಕಿತ್ತೆನ್ನಲಾಗಿದ್ದು ಮೊದಲ ಪ್ರಸಾರ ಡಿಸೆಂಬರ್ 26, 1945ರಲ್ಲಿ ಮಾಡಲಾಗಿದ್ದರೆ ಅದರಲ್ಲಿ ಬೋಸ್ ‘‘ನಾನೀಗ ವಿಶ್ವದ ದೊಡ್ಡ ಶಕ್ತಿಗಳ ಆಶ್ರಯದಲ್ಲಿದ್ದೇನೆ. ನನ್ನ ಹೃದಯ ಭಾರತಕ್ಕಾಗಿ ತುಡಿಯುತ್ತಿದೆ. ಮೂರನೆ ವಿಶ್ವ ಯುದ್ಧವಾದಾಗ ನಾನು ಮತ್ತೆ ಭಾರತಕ್ಕೆ ಮರಳುತ್ತೇನೆ. ಅದು ಮುಂದಿನ ಹತ್ತು ವರ್ಷಗಳಲ್ಲಿ ಅಥವಾ ಅದಕ್ಕಿಂತಲೂ ಮೊದಲು ಆಗಬಹುದು.’’ಎಂದಿದ್ದರು. ನಂತರದ ಪ್ರಸಾರ ಜನವರಿ 1, 1946ರಲ್ಲಿ ನಡೆದಿದ್ದು ‘‘ನಮಗೆ ಎರಡು ವರ್ಷದೊಳಗೆ ಸ್ವಾತಂತ್ರ್ಯ ದೊರೆಯಬೇಕು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕು. ಭಾರತ ಅಹಿಂಸೆಯ ಮುಖಾಂತರ ಸ್ವತಂತ್ರವಾಗುವುದಿಲ್ಲ ಆದರೆ ನನಗೆ ಮಹಾತ್ಮ ಗಾಂಧಿಯವರ ಬಗ್ಗೆ ಗೌರವವಿದೆ.’’ ಎಂದಿದ್ದರೆ ಫೆಬ್ರವರಿ 1946ರಲ್ಲಿ ಮಾಡಿದ ಭಾಷಣದಲ್ಲಿ ‘‘ಇದು ಸುಭಾಸ್ ಚಂದ್ರ ಬೋಸ್ ಮಾತನಾಡುತ್ತಿರುವುದು. ಜೈಹಿಂದ್. ಜಪಾನ್ ಶರಣಾಗತಿಯ ನಂತರ ನನ್ನ ಭಾರತದ ಸಹೋದರ ಸಹೋದರಿಯರನ್ನು ಉದ್ದೇಶಿಸಿ ನಾನು ಮೂರನೇ ಬಾರಿ ಮಾತನಾಡುತ್ತಿದ್ದೇನೆ. ಇಂಗ್ಲೆಂಡಿನ ಪ್ರಧಾನಿ ಪೆಥ್ವಿಕ್ ಲಾರೆನ್ಸ್ ಮತ್ತು ಇತರ ಇಬ್ಬರು ಸದಸ್ಯರನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿ ಖಾಯಂ ಆಗಿ ನೆಲೆಗೊಳ್ಳುವಂತೆ ಮಾಡಿ ಭಾರತದ ರಕ್ತ ಹೀರಲು ಭಾರತಕ್ಕೆ ಕಳುಹಿಸುತ್ತಿದ್ದಾರೆ,’’ಎಂದು ಹೇಳಿದ್ದರು.
ಬಿಡುಗಡೆಗೊಂಡ ಕಡತದಲ್ಲಿ ಭಾರತದಲ್ಲಿ ಬ್ರಿಟಿಷರ ಕಟ್ಟ ಕಡೆಯ ವೈಸ್‌ರಾಯ್ ಲೂಯಿಸ್ ಮೌಂಟ್ ಬ್ಯಾಟನ್ ಅವರಿಗೆ ಖುರ್ಷೆದ್ ನೌರೋಜಿಯವರು ಜುಲೈ 22,1946ರಲ್ಲಿ ಬರೆದ ಪತ್ರವೊಂದರ ಉಲ್ಲೇಖವೂ ಇದೆ.





