ಪ್ರತಿಪಕ್ಷವನ್ನೊಳಗೊಂಡ ನೂತನ ಸರಕಾರಕ್ಕೆ ಆಕ್ಷೇಪವಿಲ್ಲ: ಸಿರಿಯ ಅಧ್ಯಕ್ಷ
ನಮಗೆ ಒಪ್ಪಿಗೆಯಿಲ್ಲ: ಪ್ರತಿಪಕ್ಷ

ಮಾಸ್ಕೊ/ಬೆರೂತ್, ಮಾ. 31: ಪ್ರತಿಪಕ್ಷದ ನಾಯಕರನ್ನು ಒಳಗೊಂಡ ನೂತನ ಸಿರಿಯ ಸರಕಾರವನ್ನು ಒಪ್ಪಿಕೊಳ್ಳಲು ತಾನು ಸಿದ್ಧ ಎಂದು ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸಾದ್ ಹೇಳಿದ್ದಾರೆ. ಆದರೆ, ಬಶರ್ ಅಧಿಕಾರದಲ್ಲಿರುವ ಯಾವುದೇ ಸರಕಾರವು ಕಾನೂನುಬದ್ಧವಲ್ಲ ಎಂಬುದಾಗಿ ಪ್ರತಿಪಕ್ಷಗಳು ಈ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿವೆ.
ನೂತನ ಕರಡು ಸಂವಿಧಾನವನ್ನು ವಾರಗಳ ಅವಧಿಯಲ್ಲಿ ಸಿದ್ಧಪಡಿಸಬಹುದಾಗಿದೆ ಹಾಗೂ ಪ್ರತಿಪಕ್ಷಗಳು, ಸ್ವತಂತ್ರ ವ್ಯಕ್ತಿಗಳು ಮತ್ತು ನಿಷ್ಠಾವಂತರನ್ನೊಳಗೊಂಡ ನೂತನ ಸರಕಾರಕ್ಕೆ ಆಕ್ಷೇಪವಿಲ್ಲ ಎಂದು ಅವರು ಹೇಳಿರುವುದಾಗಿ ರಶ್ಯದ ವಾರ್ತಾಸಾಂಸ್ಥೆ ಆರ್‌ಐಎ ವರದಿ ಮಾಡಿದೆ.
ಪಾಲ್ಮೈರ ನಗರದಲ್ಲಿ ಲಭಿಸಿರುವ ಸೇನಾ ವಿಜಯದಿಂದ ಸಿರಿಯ ಅಧ್ಯಕ್ಷ ಉತ್ತೇಜನಗೊಂಡಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮುಂದಿನ ತಿಂಗಳು ಪುನಾರಂಭ ಗೊಳ್ಳಲಿರುವ ಜಿನೇವ ಶಾಂತಿ ಮಾತುಕತೆಯಲ್ಲಿ ಖಾತೆಗಳ ಹಂಚಿಕೆ ಮತ್ತು ಇತರ ತಾಂತ್ರಿಕ ವಿಷಯಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಬಶರ್ ತಿಳಿಸಿದರು. ಇವುಗಳು ಕಷ್ಟದ ಕೆಲಸವೇನಲ್ಲ ಎಂದರು. ಪ್ರತಿಪಕ್ಷದ ಸಂಧಾನಕಾರರು ಅಸಾದ್‌ರ ಈ ಹೇಳಿಕೆಗಳನ್ನು ತಕ್ಷಣ ತಳ್ಳಿಹಾಕಿದ್ದಾರೆ. ಪೂರ್ಣ ಅಧಿಕಾರವನ್ನು ಹೊಂದಿರುವ ಪರಿವರ್ತನೆ ಸರಕಾರವೊಂದನ್ನು ಸ್ಥಾಪಿಸುವ ಮೂಲಕ ಮಾತ್ರ ರಾಜಕೀಯ ಪರಿಹಾರವೊಂದನ್ನು ಕಂಡುಹಿಡಿಯಲು ಸಾಧ್ಯವಲ್ಲದೆ, ಅಸಾದ್ ನೇತೃತ್ವದ ಇನ್ನೊಂದು ಸರಕಾರದಿಂದಲ್ಲ ಎಂದು ಅವರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
‘‘ಬಶರ್ ಅಲ್ ಅಸಾದ್ ಮಾತನಾಡುತ್ತಿರುವುದಕ್ಕೂ ರಾಜಕೀಯ ಪ್ರಕ್ರಿಯೆಗೂ ಸಂಬಂಧವಿಲ್ಲ’’ ಎಂದು ಉನ್ನತ ಸಂಧಾನ ಸಮಿತಿಯ ಜಾರ್ಜ್ ಸಬ್ರ ಹೇಳಿದರು.
ಅಮೆರಿಕದ ತಿರಸ್ಕಾರ
ಸಿರಿಯದ ಅಧ್ಯಕ್ಷರ ಪ್ರಸ್ತಾಪವನ್ನು ಅಮೆರಿಕವೂ ತಿರಸ್ಕರಿಸಿದೆ. ‘‘ರಾಷ್ಟ್ರೀಯ ಏಕತಾ ಸರಕಾರದ ಭಾಗವಾಗಿ ಅವರು ತನ್ನನ್ನು ಕಲ್ಪಿಸಿಕೊಂಡರೋ ಏನೋ ನನಗೆ ಗೊತ್ತಿಲ್ಲ. ಆದರೆ, ಅದು ನಮಗೆ ಕೂಡಿಬರುವುದಿಲ್ಲ’’ ಎಂದು ಶ್ವೇತಭವನದ ವಕ್ತಾರ ಜೋಶ್ ಅರ್ನೆಸ್ಟ್ ತಿಳಿಸಿದರು.





